ಶತ್ರು ರಾಷ್ಟ್ರಗಳಿಗೆ ಕಡಿವಾಣ ಹಾಕಲು ಅಮೆರಿಕ ಹೇರಿದ್ದ ನಿರ್ಬಂಧದಿಂದ ಭಾರತಕ್ಕೆ ವಿನಾಯಿತಿ

ವಾಷಿಂಗ್ಟನ್‌: ತನ್ನ ಶತ್ರು ರಾಷ್ಟ್ರಗಳಿಗೆ ಕಡಿವಾಣ ಹಾಕುವ ಸಂಬಂಧ ವಿಶ್ವದ ದೊಡ್ಡಣ್ಣ ಅಮೆರಿಕ ಜಾರಿಗೆ ತರಲು ನಿರ್ಧರಿಸಿದ್ಧ ನಿರ್ಬಂಧ ನೀತಿಯಿಂದ ಭಾರತದಂತಹ ರಾಷ್ಚ್ರಗಳಿಗೆ ವಿನಾಯಿತಿ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಪ್ರಮುಖವಾಗಿ ರಷ್ಯಾ, ಇರಾಕ್, ಚೀನಾದಂತಹ ವಿರೋಧಿ ರಾಷ್ಟ್ರಗಳನ್ನು ಹಣಿಯಲು ಮುಂದಾಗಿದ್ದ ಅಮೆರಿಕ ತನ್ನ ಮಿತ್ರರಾಷ್ಟ್ರಗಳ ಮೇಲೆ ನಿರ್ಬಂಧದ ಮೂಲಕ ಒತ್ತಡ ಹೇರಲು ಮುಂದಾಗಿತ್ತು. ಇದಕ್ಕಾಗಿ ಕಾಟ್ಸಾಕಾಯಿದೆ ಜಾರಿಗೆ ತರಲು ಅಮೆರಿಕ ಸರ್ಕಾರ ಮುಂದಾಗಿದೆ. ಈ ಕಾಯ್ದೆ ಅನ್ವಯ ಅಮೆರಿಕದ ಮಿತ್ರರಾಷ್ಟ್ರಗಳು ಅಮೆರಿಕದ ಶತೃರಾಷ್ಟ್ರಗಳೊಂದಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಯಾವುದೇ ರೀತಿಯ ವಾಣಿಜ್ಯ, ರಕ್ಷಣಾ ವಹಿವಾಟು ಹೊಂದುವ ಹಾಗಿಲ್ಲ. ಆದರೆ ಅಮೆರಿಕದ ಈ ನಿರ್ಧಾರಕ್ಕೆ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅಮೆರಿಕ ಭಾರತದಂತಹ ರಾಷ್ಟ್ರಗಳಿಗೆ ವಿನಾಯಿತಿ ನೀಡಲು ಮುಂದಾಗಿದೆ.

ಅಮೆರಿಕದ ಶತ್ರುಗಳ ಮೇಲೆ ಕಡಿವಾಣ ಹಾಕಲು ನಿರ್ಬಂಧ ಕಾಯಿದೆ( ಕಾಟ್ಸಾ)ಯ ವಿಧಿಯೊಂದಕ್ಕೆ ತಿದದ್ದುಪಡಿ ತರಲು ಬೇಕಿರುವ ಶಾಸನಾತ್ಮಕ ಪ್ರಕ್ರಿಯೆಗಳಿಗೆ ಸೆನೆಟ್‌ ಹಾಗೂ ಸಶಸ್ತ್ರ ಪಡೆಗಳ ಸಮಿತಿ ಜಂಟಿಯಾಗಿ ಮುಂದಾಗಿವೆ. ರಷ್ಯನ್‌ ಗುಪ್ತಚರ ಇಲಾಖೆಗಳು ಹಾಗೂ ಸೈಬರ್‌ ದಾಳಿಯಲ್ಲಿ ಭಾಗಿಯಾಗಿರುವ ಇತರ ಏಜೆನ್ಸಿಗಳ ಮೇಲೆ ಕಡಿವಾಣ ಹಾಕಲು ಈ ಕಾಯ್ದೆ ಅನಿವಾರ್ಯ ಎಂದು ಅಮೆರಿಕ ಸರ್ಕಾರ ಹೇಳಿತ್ತು. 

ರಷ್ಯಾ ದೇಶವೇ ಪ್ರಮುಖ ಗುರಿ
ಕಾಟ್ಸಾ ಮೂಲಕ ರಷ್ಯನ್‌ ನಿರ್ಮಿತ ಸುಧಾರಿತ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳದಂತೆ ಅಮೆರಿಕ ತನ್ನ ಮಿತ್ರ ರಾಷ್ಟ್ರಗಳ ಮೇಲೆ ಪ್ರಭಾವ ಬೀರಲು ನೋಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಗೆ ಮುಂದಾಗಿರುವ ಭಾರತದ ನಡೆಯಿಂದ ಅಮೆರಿಕ ಒಳಗೊಳಗೇ ಕುದಿಯುತ್ತಿದೆ. ಭಾರತದ ಸಾಂಪ್ರದಾಯಿಕ ಶಸ್ತ್ರಾಸ್ತ್ರ ಪೂರೈಕೆದಾರನಾದ ರಷ್ಯಾ ಮೇಲಿನ ಅವಲಂಬನೆಯನ್ನು ಕಳೆದ ದಶಕದಿಂದ ಭಾರತ ಸಾಕಷ್ಟು ತಗ್ಗಿಸಿಕೊಂಡಿದ್ದು, ಇದೇ ವೇಳೆ ಅಮೆರಿಕದೊಂದಿಗೆ ಸಾಕಷ್ಟು ರಕ್ಷಣಾ ಸಂಬಂಧ ಒಪ್ಪಂದಗಳನ್ನು ಮಾಡಿಕೊಂಡಿದೆ. 2007ರಿಂದ ಈಚೆಗಿನ ಅಂಕಿಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ, ಅಮೆರಿಕ ಭಾರತದ ಅತಿ ದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರನಾಗಿದೆ. ಯುದ್ಧ ವಿಮಾನಗಳು ಹಾಗು ಮಾನವರಹಿತ ಡ್ರೋನ್‌ಗಳನ್ನು ಖರೀದಿ ಮಾಡಲು ಭಾರತ ಅಮೆರಿಕದತ್ತ ನೋಡುತ್ತಿದೆ.