ಮೋದಿ ನಾಯಕತ್ವದಲ್ಲಿ ಭಾರತ ಜಾಗತಿಕ ಬೆಳವಣಿಗೆ: ಸಿ.ಸಿ. ಪಾಟೀಲ

ಮೋದಿ ನಾಯಕತ್ವದಲ್ಲಿ ಭಾರತ ಜಾಗತಿಕ ಬೆಳವಣಿಗೆ: ಸಿ.ಸಿ. ಪಾಟೀಲ India's global growth under Modi's leadership: C.C. Patil

     ಗದಗ 20: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಕಳೆದ 12 ವರ್ಷಗಳಲ್ಲಿ ಅಥವಾ ದಶಕಕ್ಕೂ ಹೆಚ್ಚು ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಅಭೂತಪೂರ್ವ ಬೆಳವಣಿಗೆಯನ್ನು ಕಂಡಿದೆ.ದೇಶದ ಸರ್ವತೋಮುಖ ಅಭಿವೃದ್ಧಿ ಸೇರಿ ಆರ್ಥಿಕ, ಸಾಮಾಜಿಕ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ದೇಶ ಮುಂಚೂಣಿಯಲ್ಲಿದೆ ಎಂದು ನರಗುಂದ ಶಾಸಕ ಸಿ.ಸಿ.ಪಾಟೀಲ ತಿಳಿಸಿದರು.         

      ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಉಚಿತ ಮನೆ, ಉಜ್ವಲ ಯೋಜನೆ ಉಚಿತ ಗ್ಯಾಸ್ ಸಂಪರ್ಕ, ಜಲ ಜೀವನ್ ಮಿಷನ್ ಮನೆ ಮನೆಗೆ ಗಂಗೆ, ಮತ್ತು ಆಯುಷ್ಮಾನ್ ಭಾರತ್ ಉಚಿತ ಆರೋಗ್ಯ ವಿಮೆ ಯೋಜನೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪಿವೆ ಎಂದು ಅವರು ವಿವರಿಸಿದರು.           

      ಭಾರತದ ಗಡಿಗಳು ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿವೆ. ಭಯೋತ್ಪಾದನೆಗೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವನಿಗೆ ಇಂದು ಅತ್ಯಂತ ಹೆಚ್ಚಿನ ಗೌರವ ದೊರೆತಿದೆ. ದೇಶಾದ್ಯಂತ ಹೆದ್ದಾರಿಗಳ ನಿರ್ಮಾಣ, ರೈಲ್ವೆ ಇಲಾಖೆಯ ಆಧುನೀಕರಣ ವಂದೇ ಭಾರತ್ ರೈಲುಗಳು, ಮತ್ತು ಡಿಜಿಟಲ್ ಇಂಡಿಯಾ ಕ್ರಾಂತಿಯ ಮೂಲಕ ಭಾರತವು ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಿದೆ.    

       ಮೋದಿ ಅವರ ಆಡಳಿತಾವಧಿಯಲ್ಲಿ ದೇಶವು ಹಗರಣ ಮುಕ್ತ ಮತ್ತು ಪಾರದರ್ಶಕ ಆಡಳಿತವನ್ನು ಕಂಡಿದೆ. ಈ ಹಿಂದೆ ಜಗತ್ತಿನ ಎದುರು ಕೈಚಾಚುತ್ತಿದ್ದ ಭಾರತ, ಇಂದು ಜಗತ್ತಿಗೇ ದಾರಿ ದೀಪವಾಗಿದೆ. ಕೇವಲ ಭರವಸೆಗಳನ್ನು ನೀಡದೆ, ನುಡಿದಂತೆ ನಡೆದ ಸರ್ಕಾರ ನಮ್ಮದು.ಸಾರ್ವಜನಿಕ ಸೇವೆಯೇ ನಮ್ಮ ಸಂಕಲ್ಪ.ರೈತರ ಆದಾಯ ದುಪ್ಪಟ್ಟು ಮಾಡಲು ಕಿಸಾನ್ ಸಮ್ಮಾನ್ ನಿಧಿಯಂತಹ ಯೋಜನೆಗಳು ನೇರವಾಗಿ ರೈತರ ಖಾತೆಗೆ ಹಣ ತಲುಪಿಸುತ್ತಿವೆ. ಮಧ್ಯವರ್ತಿಗಳ ಹಾವಳಿ ಸಂಪೂರ್ಣವಾಗಿ ತಪ್ಪಿದೆ.  ಕೋವಿಡ್ ಬಂದ ನಂತರ ನಮ್ಮ ದೇಶವನ್ನ ಹೇಗೆ ರಕ್ಷಿಸಬೇಕು ಅಂತಾ ಗುರುತಿಸಿದ್ದು, ವಲಸಿಗರ ಸಂಖ್ಯೆ ಸೊನ್ನೆ ಪ್ರಮಾಣ ಮಾಡಿದ್ದು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದು ಸಿ ಸಿ ಪಾಟೀಲ ತಿಳಿಸಿದರು.           

    ಪತ್ರಿಕಾ ಗೋಷ್ಠಿಯಲ್ಲಿ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ವಿ ಪ  ಸದಸ್ಯ ಎಸ್ ವಿ ಸಂಕನೂರ, ಬಿಜೆಪಿ ಜಿಲ್ಲಾಧ್ತಕ್ಷ ರಾಜು ಕುರುಡಗಿ, ಬಿಜೆಪಿ ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಅಧ್ಯಕ್ಷರು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವಾತಿ ಅಕ್ಕಿ, ಶಶಿಧರ ದಿಂಡೂರ,ಎಂ ಎಸ್ ಕರಿಗೌಡ್ರ, ನಿಂಗರಾಜ ಪಾಟಿಲ,ಉಷಾ ದಾಸರ, ಪ್ರಕೋಷ್ಠಗಳ ಜಿಲ್ಲಾ ಸಂಯೋಜಕರು, ನಿರ್ಮಲಾ ಕೊಳ್ಳಿ,ಅಧ್ಯಕ್ಷರು ಮಹಿಳಾ ಮೋರ್ಚಾ ಬಿಜೆಪಿ ಸೇರಿದಂತೆ ಪಕ್ಷದ ಮುಖಂಡರು ಭಾಗಿಯಾಗಿದ್ದರು.