ಬೆಂಗಳೂರು 10: ಮಾಸಿಕ 15,000 ರೂ.ಗಳ ನಿಗದಿತ ಗೌರವಧನ ಮತ್ತು ಇತರ ಸೌಲಭ್ಯ ನೀಡುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಆರೋಗ್ಯ ಸೌಧದಲ್ಲಿ ಗುರುವಾರ ಮಧ್ಯಾಹ್ನ ಆರೋಗ್ಯ ಇಲಾಖೆ ಆಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಚರ್ಚಿಸಲಾಯಿತು.
ಒಂದೆಡೆ ಸಂಘಟನೆಯ ಸದಸ್ಯರು ಮತ್ತು ರಾಜ್ಯದ ಅಧಿಕಾರಿಗಳ ನಡುವೆ ಮಾತುಕತೆ ನಡೆಯತ್ತಿದ್ದರೂ, ಸರ್ಕಾರದ ಮನವಿಗೆ ಒಪ್ಪದ ಆಶಾ ಕಾರ್ಯಕರ್ತೆಯರು ಪಟ್ಟು ಬಿಡದೆ ಪ್ರತಿಭಟನೆ ಮುಂದುವರೆಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಅವರು, ತಿಂಗಳಿಗೆ 15 ಸಾವಿರ ರೂ. ಗೌರವಧನ ನೀಡುವುದು ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಸರ್ಕಾರ ಕೂಡಲೇ ರೂ.12 ಸಾವಿರ ಗೌರವ ಧನ ನಿಗದಿಪಡಿಸಿ ಬಳಿಕ ಹಂತ ಹಂತವಾಗಿ ಮೂರು ಸಾವಿರ ರೂಪಾಯಿ ಹೆಚ್ಚಿಸಲಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮುಷ್ಕರದಿಂದಾಗಿ ಗರ್ಭಿಣಿಯರು ಬಾಣಂತಿಯರಿಗೆ ತೊಂದರೆ ಆಗುತ್ತಿದೆ. ಇದಕ್ಕೆ ಇಲಾಖೆಯೇ ಹೊಣೆ. ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ತಕ್ಕಂತೆ ವೇತನ ಸಿಗುತ್ತಿಲ್ಲ. ತಾಂತ್ರಿಕ ಸಮಸ್ಯೆಯಿಂದ ಆಶಾ ಪೋರ್ಟಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ವೈದ್ಯಕೀಯ ಪ್ರಮಾಣ ಪತ್ರ ಹಾಜರುಪಡಿಸಿದರೂ ಅನಾರೋಗ್ಯ ಪೀಡಿತರಿಗೆ ರಜೆ ದೊರೆಯುತ್ತಿಲ್ಲ. ಇಎಸ್‌ಐ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.