ಗದಗ ತಾಲ್ಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿದ್ದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ: ಅನಿಲ ಮೆಣಸಿನಕಾಯಿ
Indefinite hunger strike if Gadag taluk is not immediately declared a drought-hit area: Anil Menasin
ಗದಗ 17: ರಾಜ್ಯ ಸರ್ಕಾರವು ಗದಗ ಜಿಲ್ಲೆಯ ಇತರೆ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವಾಗ, ಗಂಭೀರ ಬರ ಪರಿಸ್ಥಿತಿ ಎದುರಿಸುತ್ತಿರುವ ಗದಗ ತಾಲ್ಲೂಕನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಅತ್ಯಂತ ಅನ್ಯಾಯಕರ ಹಾಗೂ ಖಂಡನೀಯ ಎಂದು ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಅನಿಲ ಪಿ ಮೆಣಸಿನಕಾಯಿ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಗದಗ ತಾಲ್ಲೂಕಿನ ರೈತರು ಮಳೆಯ ಕೊರತೆ, ಬೆಳೆ ನಷ್ಟ, ಅಂತರ್ಜಲ ಕುಸಿತ, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಅಭಾವದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ.
ಬಿತ್ತನೆಗಾಗಿ ಸಾಲ ಮಾಡಿಕೊಂಡ ರೈತರು ಬೆಳೆ ಕೈಕೊಟ್ಟಿರುವುದರಿಂದ ಆರ್ಥಿಕವಾಗಿ ಕುಸಿದು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಗದಗ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬರ ಘೋಷಣೆ ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ. ಅದರೊಂದಿಗೆ ರೈತರಿಗೆ ಬೆಳೆ ನಷ್ಟ ಪರಿಹಾರ, ಸಾಲ ಮರುಪಾವತಿಗೆ ವಿನಾಯಿತಿ, ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚುವರಿ ಕೆಲಸ ಹಾಗೂ ಇತರ ಪರಿಹಾರ ಸೌಲಭ್ಯಗಳು ದೊರೆಯುತ್ತವೆ. ಗದಗ ತಾಲ್ಲೂಕನ್ನು ಕೈಬಿಟ್ಟರೆ ಇಲ್ಲಿನ ರೈತರು ಈ ಎಲ್ಲ ನೆರವುಗಳಿಂದ ವಂಚಿತರಾಗುತ್ತಾರೆ.
ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಅಧಿಕಾರಿಗಳಿಂದ ಕೂಡಲೇ ಮರುಪರೀಶೀಲನಾ ಸಮೀಕ್ಷೆ ನಡೆಸಿಸಿ, ವಾಸ್ತವಿಕ ಬೆಳೆಹಾನಿ ಮತ್ತು ಮಳೆಯ ಕೊರತೆಯ ವರದಿಯನ್ನು ಪಡೆದು ಗದಗ ತಾಲ್ಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸುತ್ತೇವೆ. ರಾಜಕೀಯ ಅಥವಾ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಗದಗ ತಾಲ್ಲೂಕಿನ ರೈತರಿಗೆ ಅನ್ಯಾಯ ಮಾಡಬಾರದು. ಬರಕ್ಕೆ ತಾಲ್ಲೂಕಿನ ಗಡಿಗಳ ಪರಿಚಯವಿಲ್ಲ. ಪಕ್ಕದ ತಾಲ್ಲೂಕುಗಳಲ್ಲಿ ಬರ ಇದ್ದು, ಗದಗ ತಾಲ್ಲೂಕಿನಲ್ಲಿ ಬರ ಇಲ್ಲ ಎನ್ನುವುದು ವಾಸ್ತವಕ್ಕೆ ವಿರುದ್ಧವಾಗಿದೆ.
ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಗದಗ ತಾಲ್ಲೂಕಿನ ರೈತರು, ಯುವಕರು, ಮಹಿಳೆಯರು ಮತ್ತು ನಾಗರಿಕರೊಂದಿಗೆ ಸೇರಿ ಪ್ರಜಾಸತ್ತಾತ್ಮಕ ಹಾಗೂ ಶಾಂತಿಯುತ ಮಾರ್ಗದಲ್ಲಿ ಹೋರಾಟ ನಡೆಸಲಾಗುವುದು. ಮೊದಲ ಹಂತವಾಗಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಅದಕ್ಕೂ ಸ್ಪಂದನೆ ದೊರೆಯದಿದ್ದರೆ, ಪೂರ್ವಭಾವಿ ನೋಟಿಸ್ ನೀಡಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದು ಅನಿವಾರ್ಯವಾಗಲಿದೆ. ಯಾವುದೇ ರೈತನು ಪರಿಹಾರದಿಂದ ವಂಚಿತನಾಗಬಾರದು. ಗದಗ ತಾಲ್ಲೂಕಿನ ರೈತರ ಬದುಕಿನೊಂದಿಗೆ ಸರ್ಕಾರ ಆಟವಾಡಬಾರದು.
ನಮ್ಮ ಪ್ರಮುಖ ಬೇಡಿಕೆಗಳುಗದಗ ತಾಲ್ಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ವೈಜ್ಞಾನಿಕ ಮತ್ತು ಪಾರದರ್ಶಕ ಮರುಸಮೀಕ್ಷೆ ನಡೆಸಬೇಕು.ಬೆಳೆ ನಷ್ಟ ಅನುಭವಿಸಿದ ರೈತರಿಗೆ ತ್ವರಿತ ಪರಿಹಾರ ಬಿಡುಗಡೆ ಮಾಡಬೇಕು. ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗೆ ತುರ್ತು ವ್ಯವಸ್ಥೆ ಮಾಡಬೇಕು.ರೈತರ ಸಾಲ ವಸೂಲಾತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸೂಕ್ತ ಸಾಲ ಪರಿಹಾರ ನೀಡಬೇಕು.ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚುವರಿ ಉದ್ಯೋಗ ದಿನಗಳನ್ನು ಒದಗಿಸಬೇಕು ಎಂದು ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 