ದೇಶದ ಮೊದಲ ಮಿಲಿಟರಿ ಏರ್‌ಕ್ರಾಫ್ಟ್‌ ತಯಾರಿಕಾ ಕಾರ್ಖಾನೆ ಉದ್ಘಾಟನೆ

ವಡೋದರಾ 28: ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್‌ ಪ್ರಧಾನಿ ಪೆಡ್ರೊ ಸ್ಯಾಂಚಜ್ ಇಂದು ಬೆಳಗ್ಗೆ ಗುಜರಾತ್‌ನ ವಡೋದರಾ ನಗರದಲ್ಲಿ ಟಾಟಾ ಏರ್ ಬಸ್ ತಯಾರಿಕಾ ಘಟಕವನ್ನು ಉದ್ಘಾಟಿಸಿದರು. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಕ್ಯಾಂಪಸ್ ನಲ್ಲಿ ಸಿ-295 ವಿಮಾನ ತಯಾರಿಕಾ ಸಂಕೀರ್ಣವನ್ನು ಸ್ಥಾಪಿಸಲಾಗಿದೆ. ಇದು ಮಿಲಿಟರಿ ಏರ್ಕ್ರಾಫ್ಟ್ಗಳನ್ನು ಉತ್ಪಾದಿಸುವ ದೇಶದ ಮೊದಲ ಖಾಸಗಿ ವಲಯದ ಕಾರ್ಖಾನೆಯಾಗಿದೆ.

ಈ ಯೋಜನೆಯು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ವೃದ್ಧಿಸುವುದು ಮಾತ್ರವಲ್ಲದೆ, ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ವರ್ಲ್ಡ್ ಮಿಶನ್ಗೆ ವೇಗ ನೀಡಿದೆ ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ, ಇತ್ತೀಚೆಗೆ ನಿಧನರಾದ ರತನ್ ಟಾಟಾ ಅವರಿಗೆ ಗೌರವ ವಂದನೆ ಅರ್ಪಿಸಿದ ಮೋದಿ, ಏರ್ಬಸ್ ಮತ್ತು ಟಾಟಾ ಸಂಸ್ಥೆಗಳಿಗೆ ಶುಭಾಶಯ ತಿಳಿಸಿದ್ದಾರೆ.

ಏರ್ಬಸ್ ಸಿ295 ಒಂದು ಮಧ್ಯಮ ಗಾತ್ರದ ಸರಕು ಸಾಗಣೆಯ ಏರ್ಕ್ರಾಫ್ಟ್ ಆಗಿದ್ದು, ಸ್ಪ್ಯಾನಿಶ್ನ ಏರೋಸ್ಪೇಸ್ ಕಂಪನಿ ಸಿಎಎಸ್ಎ ಉತ್ಪಾದನೆ ಮಾಡುತ್ತಿತ್ತು. ಅದು ಈಗ ಯೂರೋಪ್ನ ಬಹುರಾಷ್ಟ್ರೀಯ ಏರ್ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಡಿವಿಜನ್ನ ಭಾಗವಾಗಿದೆ.

ಸಿ295 ಏರ್ಬಸ್ ಕಾರ್ಖಾನೆಯು ನವಭಾರತದ ಹೊಸ ರೀತಿಯ ಕೆಲಸದ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಅಕ್ಟೋಬರ್ 2022ರಲ್ಲಿ ಅಡಿಗಲ್ಲು ಹಾಕಲಾದ ಈ ಕಾರ್ಖಾನೆ ಈಗ ಉದ್ಘಾಟನೆಗೊಂಡಿರುವುದು ಭಾರತದಲ್ಲಿ ಯೋಜನೆಯ ವೇಗದ ಕಾರ್ಯಗತಕ್ಕೆ ಸಾಕ್ಷಿಯಾಗಿದೆ ಎಂದು ಮೋದಿ ಹೆಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, C-295 ಸೌಲಭ್ಯ ನವ ಭಾರತದ ಕೆಲಸದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ನಾನು ಗುಜರಾತ್ ಸಿಎಂ ಆಗಿದ್ದಾಗ ವಡೋದರಾದಲ್ಲಿ ರೈಲು ಬೋಗಿಗಳ ತಯಾರಿಕೆ ಕಾರ್ಖಾನೆ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಇಂದು ನಾವು ಆ ಕಾರ್ಖಾನೆಯಲ್ಲಿ ತಯಾರಿಸಿದ ಮೆಟ್ರೋ ಕೋಚ್‌ಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಭವಿಷ್ಯದಲ್ಲಿ ಇಲ್ಲಿನ ಕಾರ್ಖಾನೆಯಲ್ಲಿ ತಯಾರಾದ ವಿಮಾನಗಳನ್ನು ಇತರ ದೇಶಗಳಿಗೂ ರಫ್ತು ಮಾಡುವ ಭರವಸೆಯಿದೆ ಎಂದರು.

ಸ್ಪೇನ್ ಪ್ರಧಾನಿ ಸ್ಯಾಂಚೆಜ್ ಮಾತನಾಡಿ, ಹೊಸ ಕೈಗಾರಿಕಾ ತಾಣದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಟಾಟಾ ಸಮೂಹವನ್ನು "ದೈತ್ಯರಲ್ಲಿ ದೈತ್ಯ" ಎಂದು ಗುಣಗಾನ ಮಾಡಿದರು. ಇಂದು ನಾವು ಅತ್ಯಾಧುನಿಕ ಕೈಗಾರಿಕಾ ಸೌಕರ್ಯವನ್ನು ಮಾತ್ರ ಅಧಿಕೃತವಾಗಿ ಉದ್ಘಾಟಿಸುತ್ತಿಲ್ಲ. ಏರ್‌ಬಸ್ ಮತ್ತು ಟಾಟಾ ನಡುವಿನ ಈ ಪಾಲುದಾರಿಕೆಯು ಭಾರತೀಯ ಏರೋಸ್ಪೇಸ್ ಉದ್ಯಮದ ಪ್ರಗತಿಗೆ ಕೊಡುಗೆ ನೀಡುತ್ತದೆ. ಅಲ್ಲದೇ ಇತರ ಯುರೋಪಿಯನ್ ಕಂಪನಿಗಳ ಆಗಮನಕ್ಕೆ ಹೊಸ ಬಾಗಿಲು ತೆರೆಯುತ್ತದೆ ಎಂದರು.

ಗುಜರಾತ್ ವಡೋದರಾದಲ್ಲಿ ಸಿ-295 ಮಿಲಿಟರಿ ವಿಮಾನ ತಯಾರಿಕೆಯ ಘಟಕ ಟಾಟಾ ಏರ್ಕ್ರಾಫ್ಟ್ ಕಾಂಪ್ಲೆಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಚಂದ್ರಶೇಖರನ್, ಈಗಿನಿಂದ ನಿಖರವಾಗಿ ಎರಡು ವರ್ಷಗಳ ನಂತರ ನಾವು ದೇಶಿಯವಾಗಿ ತಯಾರಿಸಿದ ಮೊದಲ C-295 ವಿಮಾನವನ್ನು ತಲುಪಿಸುತ್ತೇವೆ ಎಂದು ಹೇಳಿದರು.