ಉಗಾರದಲ್ಲಿ ಶಾಂತಿಸಾಗರ ಸಹಕಾರಿ ಶಾಖೆ ಉದ್ಘಾಟನೆ; ಸಂಸ್ಥಾಪಕರ ದೂರದೃಷ್ಟಿಯಿಂದ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತಿದೆ: ಜೀನಸೇನ ಭಟ್ಟಾರಕ ಸ್ವಾಮಿಜಿ
ಕಾಗವಾಡ 2 : ತಾಲೂಕಿನ ಶಿರಗುಪ್ಪಿ ಗ್ರಾಮದ ಜೈನ ಸಮಾಜದ ಸಮಾಜ ಸೇವಕ ದಿವಂಗತ ಡಾ. ನೇಮಣ್ಣಾ ಬೋಮಾಜ ಅವರು ಸ್ಥಾಪಿಸಿದ ಶಾಂತಿಸಾಗರ ಕ್ರೆಡಿಟ್ ಸಹಕಾರಿಯು ಆದರ್ಶ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಈಗ ಉಗಾರ ಖುರ್ದ ಪಟ್ಟಣದಲ್ಲಿ ನೂತನ ಶಾಖೆಯನ್ನು ಪ್ರಾರಂಭಿಸಿದ್ದು, ಸಹಕಾರಿಯು ಇನಷ್ಟು ಪ್ರಗತಿ ಸಾಧಿಸಲಿ ಎಂದು ನಾಂದನಿ ಜೈನಮಠದ ಜಿನಸೇನ ಭಟ್ಟಾರಕ ಸ್ವಾಮೀಜಿ ಹೇಳಿದ್ದಾರೆ. ಅವರು, ಶುಕ್ರವಾರ ದಿ. 31 ರಂದು ಉಗಾರ ಖುರ್ದ ಪಟ್ಟಣದಲ್ಲಿ ಶ್ರೀ ಶಾಂತಿಸಾಗರ ಸಹಕಾರಿಯ 10ನೇ ಶಾಖೆಗೆ ಪೂಜೆ ನೆರವೇರಿಸಿ, ಆಶೀರ್ವಚನ ನೀಡುತ್ತಾ ಮಾತನಾಡುತ್ತಿದ್ದರು. ಹಂಚಿನಾಳ ಗುರುಯೋಗಾಶ್ರಮದ ಮಠದ ಮಹೇಶಾನಂದ ಮಾತನಾಡಿ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಇದು ಆಚಾರ್ಯರ ಸಂಸ್ಥೆ ಎಂದು ಗಮನದಲ್ಲಿಟ್ಟು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಒಳ್ಳೆ ಮಟ್ಟದಲ್ಲಿ ಪ್ರಗತಿಪಥದಲ್ಲಿ ಸಾಗುತ್ತಿದೆ ಎಂದು ಹೇಳಿದರು. ಇಂಗಳಿಯ ಜ್ಞಾನದೇವ ಮಹಾರಾಜರು ಸಾನಿಧ್ಯ ವಹಿಸಿ ಶುಭ ಹಾರೈಸಿದರು. ಶಾಸಕ ರಾಜು ಕಾಗೆ ಮತ್ತು ಕರ್ನಾಟಕ ಜೈನ್ ಅಸೋಸಿಯೇಷನ್ ಉಪಾಧ್ಯಕ್ಷ ಶೀತಲಗೌಡ ಪಾಟೀಲ ಭೇಟ್ಟಿ ನೀಡಿ, ಶುಭ ಹಾರೈಸಿದರು. ಎಲ್ಲ ಗಣ್ಯರನ್ನು ಸಹಕಾರಿಯ ವತಿಯಿಂದ ಸನ್ಮಾನಿಸಲಾಯಿತು. ನಿರ್ದೇಶಕ ಡಾ. ಮಹಾಧವಲ ಭೋಮಾಜ ಮಾತನಾಡಿ, ಪಟ್ಟಣದಲ್ಲಿ 10ನೇ ಶಾಖೆ ಪ್ರಾರಂಭಿಸಿದ್ದು, ಇಲ್ಲಿಯ ವರೆಗೆ 48 ಕೋಟಿ ರೂ. ಠೇವಣಿ ಸಂಗ್ರಹಿಸಿ, 32 ಕೋಟಿ ಸಾಲ ನೀಡಲಾಗಿದೆ ಎಂದು ತಿಳಿಸಿದರು. ಈ ವೇಳೆ ಸಹಕಾರಿಯ ಅಧ್ಯಕ್ಷ ವಿದ್ಯಾಸಾಗರ ಮಾನಗಾಂವೆ, ಉಪಾಧ್ಯಕ್ಷ ಪುರಂದರ ಕನವಾಡೆ, ಮುಖ್ಯ ಶಾಖೆಯ ಎಲ್ಲ ನಿರ್ದೇಶಕರು, ಶಾಖೆಗಳ ಸಲಹಾ ಸಮಿತಿಯ ಸದಸ್ಯರು, ಸಿಬ್ಬಂದಿ ವರ್ಗದವರು, ಸ್ಥಳೀಯ ಶಾಖೆಯ ಅಧ್ಯಕ್ಷ ಚಂದ್ರಕಾಂತ ಮಸೋಟಗಿ, ಸದಸ್ಯರಾದ ಮನೋಜ ಮಾಲಗತ್ತಿ, ಬಿಪಿನಚಂದ ಗಣೇಶವಾಡಿ, ಸುರೇಶ ಹೊಸವಾಡೆ, ಆದಿನಾಥ್ ಪಾಟೀಲ, ಸಾಗರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಅನಂತಕುಮಾರ ಐನಾಪೂರೆ, ಶಾಖಾ ವ್ಯವಸ್ಥಾಪಕ ಬಾಹುಬಲಿ ಕಾಮಗೌಡ ಮತ್ತು ಅನೇಕ ಗಣ್ಯರು ಪಾಲ್ಗೊಂಡಿದ್ದರು.