ಅನ್ನಪೂರ್ಣೇಶ್ವರಿ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ ಉದ್ಘಾಟನೆ

 ಅನ್ನಪೂರ್ಣೇಶ್ವರಿ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ ಉದ್ಘಾಟನೆ Inauguration of Annapurneshwari Women's Milk Producers' Cooperative Society

ಲೋಕದರ್ಶನ ವರದಿ 

ಮಹಾಲಿಂಗಪುರ 27 : ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಪಟ್ಟಣದ ಕೆಂಗೇರಿಮಡ್ಡಿ ಬಡಾವಣೆಯಲ್ಲಿ ಸ್ಥಾಪಿಸಲಾದ ಅನ್ನಪೂರ್ಣೇಶ್ವರಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘವನ್ನು ಶಾಸಕ ಸಿದ್ದು ಸವದಿ ಸೋಮವಾರ ಉದ್ಘಾಟಿಸಿದರು. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆ ಸಹಕಾರಿ ಹಾಲು ಒಕ್ಕೂಟದ ಸಹಭಾಗಿತ್ವದಲ್ಲಿ ದಿನ್ನಿಮನಿ ತೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸಿದ್ದು ಸವದಿ, ಮಹಿಳೆಯರು ಸಂಘಟಿತರಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಕುಟುಂಬದ ಆದಾಯ ಹೆಚ್ಚಿಸುವುದರ ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು.

ನೂತನ ಮಹಿಳಾ ಸಹಕಾರಿ ಸಂಘವು ಈ ಭಾಗದ ಮಹಿಳೆಯರ ಆರ್ಥಿಕ ಸದೃಢತೆಗೆ ವರದಾನವಾಗಲಿದೆ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ರಾಸುಗಳ ಖರೀದಿ, ಪಶುಗಳಿಗೆ ಉಚಿತ ಚಿಕಿತ್ಸೆ, ರೈತ ವಿಮೆ, ಪಶು ಆಹಾರ, ಮೇವು ಕತ್ತರಿಸುವ ಯಂತ್ರ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ಅವಕಾಶವಿದೆ. ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕೂ ಸಹಾಯಧನ ದೊರೆಯಲಿದ್ದು, ಮಹಿಳೆಯರು ಸಂಘದ ಮೂಲಕ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಕೆಎಂಎಫ್ ನಿರ್ದೇಶಕ ಲಕ್ಕಪ್ಪ ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರದಿಂದ ಸಂಘಕ್ಕೆ ?2.20 ಲಕ್ಷ ಸಹಾಯಧನ ದೊರೆಯಲಿದೆ. ಡೈರಿಗೆ ಹಾಲು ಪೂರೈಸಿದ ಹತ್ತು ದಿನಗಳೊಳಗಾಗಿ ಹಣ ಪಾವತಿಯಾಗುವ ವ್ಯವಸ್ಥೆ ಕಲ್ಪಿಸಲಾಗಿದೆ.

ಮಹಿಳೆಯರಿಂದ ಉತ್ತಮ ಸ್ಪಂದನೆ ದೊರೆತರೆ ಇನ್ನಷ್ಟು ಸಂಘಗಳನ್ನು ಸ್ಥಾಪಿಸಲು ಸಹಕಾರ ನೀಡಲಾಗುವುದು ಎಂದು ಹೇಳಿದರು. ಕೆಎಂಎಫ್ ವಿಮುಲ್ ಸಹಾಯಕ ವ್ಯವಸ್ಥಾಪಕ ಎಸ್‌.ಎಸ್‌. ಅಥಣಿ, ವಿಸ್ತರಣಾಧಿಕಾರಿ ಪಿ.ಆರ್‌. ಜಾಧವ, ಮುಖಂಡ ಗುರುಪಾದ ಅಂಬಿ ಮಾತನಾಡಿದರು. ಸಂಘದ ಅಧ್ಯಕ್ಷೆ ಶೃತಿ ರವಿ ಖೋತ ಅಧ್ಯಕ್ಷತೆ ವಹಿಸಿದ್ದರು.ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಅಶೋಕಗೌಡ ಪಾಟೀಲ, ಈರ​‍್ಪ ದಿನ್ನಿಮನಿ, ಮಹಾಲಿಂಗಪ್ಪ ಕೌಜಲಗಿ, ಚನ್ನಬಸು ಯರಗಟ್ಟಿ, ಡಾ. ಅಶೋಕ ದಿನ್ನಿಮನಿ, ಚನ್ನಪ್ಪ ಪಟ್ಟಣಶೆಟ್ಟಿ, ಅಲ್ಲಪ್ಪ ಲೋಕಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಐಶ್ವರ್ಯ ಉತ್ತಂಗಿ ಪ್ರಾರ್ಥಿಸಿದರು. ನಾರನಗೌಡ ಉತ್ತಂಗಿ ನಿರೂಪಿಸಿದರು.