ನೋಯ್ಡಾದಲ್ಲಿನ ವಿಶ್ವದ ಅತಿ ದೊಡ್ಡ ಮೊಬೈಲ್ ಫ್ಯಾಕ್ಟರಿಯನ್ನು ಉದ್ಘಾಟಿಸಿದ ನಮೋ

ನೋಯ್ಡಾ: ನೋಯ್ಡಾದಲ್ಲಿನ ವಿಶ್ವದ ಅತಿ ದೊಡ್ಡ ಮೊಬೈಲ್ ಫ್ಯಾಕ್ಟರಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್-ಜೆ-ಇನ್ ಜಂಟಿಯಾಗಿ ಉದ್ಘಾಟಿಸಿದ್ದಾರೆ.

ಸುಮಾರು 35 ಎಕರೆಯ ಪ್ರದೇಶದಲ್ಲಿ ನಿರ್ಮಾಣವಾಗಿರುವ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್, ಮೊಬೈಲ್ ಫ್ಯಾಕ್ಟರಿ ವಿಶ್ವದ ಅತಿ ದೊಡ್ಡ ಮೊಬೈಲ್ ಫ್ಯಾಕ್ಟರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, 2020 ವೇಳೆಗೆ ಪ್ರತಿ ತಿಂಗಳಿಗೆ 10 ಮಿಲಿಯನ್ ಯುನಿಟ್ ಗಳಷ್ಟು ಮೊಬೈಲ್ ಗಳು ಉತ್ಪಾದನಾ ಘಟಕದಲ್ಲಿ ಉತ್ಪಾದನೆಯಾಗಲಿವೆ.

ನೋಯ್ಡಾದಲ್ಲಿ ಉದ್ಘಾಟನೆಯಾಗಿರುವ ಮೊಬೈಲ್ ಉತ್ಪಾದನಾ ಘಟಕ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ. ನೋಯ್ಡಾದ ಸೆಕ್ಟರ್ 81 ರಲ್ಲಿ 1990 ರಲ್ಲಿ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಉಪಕರಣಗಳ ಉತ್ಪಾದನಾ ಘಟಕವನ್ನು ಪ್ರಾರಂಭಿಸಲಾಗಿತ್ತು ಬಳಿಕ 1997 ರಲ್ಲಿ ಸ್ಯಾಮ್ ಸಂಗ್ ಟಿವಿ ಉತ್ಪಾದನೆಯನ್ನೂ ಪ್ರಾರಂಭಿಸಲಾಯಿತು. ಈಗಿರುವ ಮೊಬೈಲ್ ಉತ್ಪಾದನಾ ಘಟಕವನ್ನು 2005 ರಲ್ಲಿ ಪ್ರಾರಂಭಿಲಾಗಿದ್ದು, ಮತ್ತಷ್ಟು ಅಭಿವೃದ್ಧಿಗೊಳಿಸಲಾಗಿದೆ. ಕಳೆದ ವರ್ಷ ಸ್ಯಾಮ್ ಸಂಗ್ ಸಂಸ್ಥೆ ನೋಯ್ಡಾದ ಉತ್ಪಾದನಾ ಘಟಕದಲ್ಲಿ 4,915 ಕೋಟಿ ರೂಪಾಯಿ ಹೂಡಿಕೆ ಮಾಡಿ ಉತ್ಪಾದನೆಯನ್ನು ದ್ವಿಗುಣಗೊಳಿಸಲು ತೀರ್ಮಾನಿಸಿತ್ತು, ಅದಂತೆಯೇ ಈಗ ಹೊಸ ಉತ್ಪಾದನಾ ಘಟಕವನ್ನೂ ಪ್ರಾರಂಭಿಸಲಾಗಿದ್ದು ವಿಶ್ವದ ಅತಿ ದೊಡ್ಡ ಮೊಬೈಲ್ ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.