ಬೆಂಗಳೂರು, ಏ 17,ಮದ್ಯ ಸಿಗದ ಕಾರಣಕ್ಕೆ ಕೆಲವರು ಕೆಮ್ಮೆ ಸಿರಪ್, ಸ್ಯಾನಿಟೈಸರ್ ಮತ್ತಿತರ ವಸ್ತುಗಳನ್ನು ಸೇವಿಸುತ್ತಿದ್ದು, ಮತ್ತೇರಿಸಿಕೊಳ್ಳಲು ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಆದರೆ ಆಲ್ಕೋಹಾಲ್ ಅಂಶವಿರುವ ಸ್ಯಾನಿಟೈಸರ್ ಸೇವನೆಯನ್ನು ಲಾಕ್ ಡೌನ್ ಸಂದರ್ಭದಲ್ಲಿ ಚಟವನ್ನಾಗಿ ಮಾಡಿಕೊಂಡಿದ್ದಾರೆ. ಈ ಕುರಿತು ಹಲವೆಡೆ ವರದಿಗಳು ಸಹ ಆಗುತ್ತಿವೆ. ಆದರೆ ತಜ್ಞರ ಪ್ರಕಾರ ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್‌ಗಳು ಬಾಹ್ಯ ಉಪಯೋಗಕ್ಕೆ ಮಾತ್ರ ಸೀಮಿತ. ಯಾವುದೇ ಕಾರಣಕ್ಕೂ ಸೇವನೆಗೆ ಯೋಗ್ಯವಲ್ಲ. ಇದರಿಂದ ಲಿವರ್ ಗೆ ಗಂಭೀರ ಹಾನಿಯಾಗುತ್ತದೆ. ಇದು ಹಾಗೇಯೇ ಮುಂದುವರೆದರೆ ಇದು ಬಹು ಅಂಗಾಂಗಗಳ ವೈಫಲ್ಯಕ್ಕೂ ಕಾರಣವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎಚ್ಚರಿಕೆ ನೀಡಿದೆ.
ಸ್ಯಾನಿಟೈಜರ್ ನಲ್ಲಿ ಅಲ್ಕೋಹಾಲ್ ಮಾತ್ರ ಇರುವುದಿಲ್ಲ. ಇದರಲ್ಲಿ ಶೇ.೯೫ ರಷ್ಟು ಇಥೈಲ್ ಅಲ್ಕೋಹಾಲ್, ಶೇ.೦.೧೨೫ ಹೈಡ್ರೋಜನ್ ಪೆರಾಕ್ಸೈಡ್, ಶೇ.೧.೪೫ ರಷ್ಟು ಗ್ಲಿಸರಾಲ್ ಒಳಗೊಂಡಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಇಥೆನಾಲ್ ಇರುವುದರಿಂದ ಕುಡಿಯಲು ಇದು ಯಾವುದೇ ಕಾರಣಕ್ಕೂ ಯೋಗ್ಯವಲ್ಲ. ಇದರ ಸೇವನೆಯಿಂದ ಅನ್ನನಾಳ, ಜಠರ, ಸಣ್ಣಕರಳು, ದೊಡ್ಡಕರಳು, ಪಿತ್ತಜನಕಾಂಗ ಮತ್ತು ಮೇದೋಜಿರಕ ಗ್ರಂಥಿಗಳಿಗೆ ತೀವ್ರವಾದ ಹಾನಿಯಾಗುತ್ತದೆ. ಪ್ರಾಣಹಾನಿಯಾಗುವ ಸಾಧ್ಯತೆಗಳು ಇರುತ್ತವೆ. ಸ್ಯಾನಿಟೈಸರ್ ಹೊಟ್ಟೆಯಲ್ಲಿ ಹೋದರೆ ಅನ್ನನಾಳ ತೂತು ಬೀಳುತ್ತೆ, ಲೀವರ್‌ಗಳ ಕ್ರಿಯೆಗೂ ಧಕ್ಕೆ ಬರುತ್ತದೆ. ಮನುಷ್ಯ ಸಾಯುವ ಪರಿಸ್ಥಿತಿ ಬರಬಹುದು, ಆದ್ದರಿಂದ ಸ್ಯಾನಿಟೈಜರ್ ಸೇವಿಸಬಾರದು. ಇದು ಕುಡಿಯುವ ವಸ್ತು ಅಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ,