ನ್ಯೂಯಾರ್ಕ್, ಜ ೨೯ : ಜಗತ್ತಿನಲ್ಲಿ ಹಾಲಿವುಡ್ ಮಾರುಕಟ್ಟೆ ಎಷ್ಟು ದೊಡ್ಡದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ೨೦೧೯ರ ವರ್ಷದಲ್ಲಿ ಅಮೆರಿಕಾ ಚಲನಚಿತ್ರ ಉದ್ಯಮ ೪೦ ಬಿಲಿಯನ್ ಅಮರಿಕನ್ ಡಾಲರ್ ಗಳಷ್ಟು ಆದಾಯ ಗಳಿಸಿ ದಾಖಲೆ ನಿರ್ಮಿಸಿದೆ.
ಆದರೆ, ಅಮೆರಿಕಾದಲ್ಲಿರುವ ಸಾರ್ವಜನಿಕ ಗ್ರಂಥಾಲಯದೊಂದಿಗೆ ಸ್ಪರ್ಧಿಸಲು ಹಾಲಿವುಡ್ ಇನ್ನೂ ಸಾಕಷ್ಟು ಕಠಿಣ ಶ್ರಮ ಪಡಬೇಕಿದೆ ಎಂದು ಗಾಲಪ್ ಪೋಲ್ ಸಂಸ್ಥೆಯ ಸಮೀಕ್ಷೆಯೊಂದು ತಿಳಿಸಿದೆ.
ಇದೇನು... ಹಾಲಿವುಡ್ ಮಾರುಕಟ್ಟೆಗೂ.. ಸಾರ್ವಜನಿಕ ಗ್ರಂಥಾಲಯಗಳಿಗೆ ಏನು ಸಂಬಂಧ ಎಂಬ ಅನುಮಾನ ಮೂಡ ಬಹುದು. .. ಅಲ್ಲೇ ಇರುವುದು ಅಸಲಿ ವಿಷಯ. ೨೦೧೯ವರ್ಷದಲ್ಲಿ ಅಮೆರಿಕಾದಲ್ಲಿ ಸಿನಿಮಾಗಳಿಗಿಂತ ಗ್ರಂಥಾಲಯಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ ಎಂದು ಗಾಲಪ್ ಪೋಲ್ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.
ಗಾಲಪ್ ಪೌಲ್ ಸಂಸ್ಥೆ ಅಮೆರಿಕನ್ನರು ಒಂದು ವರ್ಷದಲ್ಲಿ ತಮ್ಮ ನೆಚ್ಚಿನ ಸ್ಥಳಗಳಿಗೆ ಎಷ್ಟು ಬಾರಿ ಭೇಟಿ ನೀಡುತ್ತರೆ ಎಂಬ ಬಗ್ಗೆ ಒಂದು ಸಮೀಕ್ಷೆ ನಡೆಸಿದೆ. ಕಂಪನಿಯ ವಕ್ತಾರ ಜಸ್ಟಿನ್ ಮೆಕಾರ್ಥಿ ಪ್ರಕಾರ .. ಅಮೆರಿಕಾ ದೇಶದಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ ವರ್ಷದಲ್ಲಿ ಅಮೆರಿಕಾ ನಾಗರೀಕರು ಸರಾಸರಿ ೧೦.೫ ಬಾರಿ ಸಂದರ್ಶಿಸುತ್ತಾರೆ. ಲೈವ್ ಮ್ಯೂಜಿಕ್, ಈವೆಂಟ್ಸ್, ಐತಿಹಾಸಿಕ ತಾಣಗಳಿಗೆ ವರ್ಷಕ್ಕೆ ೪ ಬಾರಿ ಭೇಟಿ ನೀಡುತ್ತಾರಂತೆ, ಮ್ಯೂಸಿಯಂ, ಜೂಜಾಟದ ಕೇಂದ್ರಗಳಿಗೆ ವರ್ಷಕ್ಕೆ ೨.೫ ಬಾರಿ ಭೇಟಿ ನೀಡುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.
ಇನ್ನೂ.. ಅಮೆರಿಕನ್ನರು ಉದ್ಯಾನವನಗಳಿಗೆ ವರ್ಷಕ್ಕೆ ೧.೫ ಬಾರಿ, ಮೃಗಾಲಯಗಳಿಗೆ ವರ್ಷಕ್ಕೆ ೦.೯ ಬಾರಿ ಸಂದರ್ಶಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಕೆಲವು ಆಸಕ್ತಿದಾಯಕ ಸಂಗತಿಗಳ ಬಗ್ಗೆ ಸಮೀಕ್ಷೆ ಬೆಳಕು ಚೆಲ್ಲುತ್ತದೆ. ವಿಶೇಷವೆಂದರೆ, ಸಾರ್ವಜನಿಕ ಗ್ರಂಥಾಲಯಗಳಿಗೆ ಭೇಟಿ ನೀಡುವ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಮೇಲ್ವರ್ಗಕ್ಕೆ ಹೋಲಿಸಿದರೆ ಗ್ರಂಥಾಲಯಕ್ಕೆ ಬರುವವರು ಕೆಳವರ್ಗದವರೇ ಹೆಚ್ಚು ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.