ಕ್ಷಣ ಹೊತ್ತಲ್ಲಿ ಪೊಣಸಿದ ಮುತ್ತುಗಳು

ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ವಿವಿಧ ಜಂಜಾಟಗಳ ಮಧ್ಯೆಯೇ ಖುಷಿಯನ್ನು ಹುಡುಕುತ್ತ ಹೊರಡುತ್ತಾನೆ. ಖುಷಿ ಎಷ್ಟು ಸಿಗುತ್ತದೋ ಅದು ನಮ್ಮ ಪಾಲು. ದುಃಖ ಬಂದರೆ ಬರಲಿ ನಗುತ್ತಿದ್ದು ಬಿಡೋಣ ಎಂದುಕೊಂಡವನಿಗೆ ಕಷ್ಟದ ನೋವುಗಳು ಕಡಿಮೆ. ಪ್ರತೀ ಕ್ಷಣವೂ ತನಗೆ ಖುಷಿಯೇ ಸಿಗಬೇಕು ಎಂದು ಅಪಾರ ನೀರೀಕ್ಷೆ ಇಟ್ಟುಕೊಳ್ಳುವವನಿಗೆ ಜಾಸ್ತಿ ನೋವುಗಳು ಸಿಗುವುದು. ಈ ಸತ್ಯ ಗೊತ್ತಿದ್ದರೂ ಸಹ ಮನುಷ್ಯ ಮೇಲಿಂದ ಮೇಲೆ ನೀರೀಕ್ಷೆಗಳ ಮೂಟೆಯನ್ನೇ ಹೊತ್ತುಕೊಂಡು ತಿರುಗಾಡುತ್ತಾನೆ. ತಾನು ಪ್ರಧಾನಿಯಾದರೆ! ಎನ್ನುವ ರಾಜಕಾರಣಿಯ ಮಾತು ನಮಗೆ ನಗೆಪಾಟಲು. ಒಮ್ಮೆ ಚುನಾವಣೆ ಗೆದ್ದಿಲ್ಲ, ಎಂಪಿ, ಎಮ್‌.ಎಲ್‌ಎ ಆಗಿಲ್ಲ ಪ್ರಧಾನಿ ಆಗ್ತಾನಂತೆ ಅಂದುಬಿಡುತ್ತೇವೆ. ಆದರೆ ಅವನ ಕನಸು ಮಾತ್ರ ನಾನು ಪ್ರಧಾನಿಯಾಗಿಯೇ ಬಿಡಬೇಕು ಎನ್ನುವಷ್ಟರ ಮಟ್ಟದ್ದು. ಆ ಕ್ಷಣದಲ್ಲಿ ಅನ್ನಿಸಿದ್ದು ಹೇಳಿದ್ದಾನೆ. ಹೇಳಿದ ಮಾತು ಅಲ್ಲಿಗೆ ಬಿಟ್ಟರೆ ಅದು ನಿಶ್ಪ್ರಯೋಜಕ. ಆದರೆ ಅದನ್ನು ಸಾಧಿಸುವುದು ಅಷ್ಟು ಸುಲಭವಲ್ಲ ಎನ್ನುವದು ಎದುರು ಕುಳಿತವರಿಗೂ ಗೊತ್ತು ಹೇಳಿದವನಿಗೂ ಗೊತ್ತು. ತಾನೇ ಆಡಿದ ಅದೊಂದು ಕ್ಷಣದ ಮಾತಿಗೆ ಕಟ್ಟು ಬಿದ್ದು ಎಲ್ಲವನ್ನು ಮೀರಿ ಆತನೇನಾದರೂ ಪ್ರಧಾನಿಯಾದರೆ ಹಿಂದಿನ ಅನೇಕ ಕಷ್ಟ ನಷ್ಟಗಳನ್ನು ಎದುರಿಸಿ ಗೆದ್ದಿರುತ್ತಾನೆ. ಅದೆಷ್ಟೋ ಸವಾಲನ್ನು ಉದ್ದಕ್ಕೂ ಪೊಣಿಸಿಕೊಂಡು ನಡೆದಿರುತ್ತಾನೆ. ಆದರೆ ನುಡಿದ ಮಾತು ಪ್ರತಿಜ್ಞೆ ಎಂದು ತೆಗೆದುಕೊಂಡರೆ ಮಾತ್ರ ಸಾಧ್ಯ. ಅದರಲ್ಲಿಯೂ ಯುವ ಪೀಳಿಗೆಯ ಜನರು ತಮ್ಮನ್ನು ಯಾವುದರಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ವಿಚಾರವನ್ನು ಸ್ಪಷ್ಟವಾಗಿ ತೆಗೆದುಕೊಳ್ಳಬೇಕು. ಇಲ್ಲವಾದರೆ ಜೀವನದ ಅಡಿಪಾಯ ಕುಸಿದು ಬೀಳುತ್ತದೆ. ಮತ್ತೆ ಮೇಲೆ ಬರುವುದು ಕಷ್ಟ. ಧೃಢವಾಗಿ ನಾವು ಕ್ಷಣದಲ್ಲಿ ತೆಗೆದುಕೊಂಡ ಒಂದು ನಿರ್ಧಾರ ನಮ್ಮ ಜೀವನಕ್ಕೆ ಮುತ್ತಿನ ಮಾಲೆಯಂತೆ ಯಶಸ್ವಿಯಾಗಲು ಸಹಕಾರಿ ಎನ್ನುವದು ಸತ್ಯ. 

ಲಾಕ್‌ಡೌನ್ ಸಮಯದಲ್ಲಿ ಅಪ್ಪನ ಬೈಕ್ ತೆಗೆದುಕೊಂಡು ಅಡ್ಡಾಡುತ್ತಿದ್ದ ಹುಡುಗ. ಒಂದು ಡಿಗ್ರಿ ಕೈನಲ್ಲಿತ್ತು. ಆ ಡಿಗ್ರಿಗೆ ಅಂಥಹ ಉದ್ಯೋಗವೇನು ದೊರಕುವುದಿಲ್ಲ ಎನ್ನುವದು ಗೊತ್ತಿತ್ತು. ಅಲ್ಲದೇ ಬರಗಾಲದಲ್ಲಿ ಇವನು ಕೆಲಸ ಕೊಡು ಎಂದರೆ ಯಾರು ತಾನೇ ಕೆಲಸ ಕೊಡುತ್ತಾರೆ. ಕೆಲಸ ಇಲ್ಲದ ಮಗನಿಗೆ ಅಪ್ಪನ ಜೊತೆ ಗಾರೆ ಕೆಲಸಕ್ಕೆ ಬಾ ಎಂದರೆ ಅದು ಮೈಗೆ ಒಗ್ಗದು. ಗೆಳೆಯರ ಜೊತೆ ಗೂಡಿ ಇಸ್ಪಿಟು ಆಡಿದ. ಪೋಲಿಸರ ಕಣ್ಣು ತಪ್ಪಿಸಿ ರಸ್ತೆಯಲ್ಲಿ ಬೈಕ್ ಓಡಿಸಿದ. ಟಿವಿ ನೋಡಿದ. ಒಂದು ವರ್ಷಗಳ ಕಾಲ ಹೀಗೆ ಉಂಡಾಡಿಯಂತೆ ಕಳೆದು ಬಿಟ್ಟ. ನಿತ್ಯ ಶಾಲೆ ಕಾಲೇಜು ಅಭ್ಯಾಸ ಎಂದು ಓಡಾಡುತ್ತಿದ್ದವನಿಗೆ ಈಗ ವರ್ಷಗಳ ಕಾಲ ಕೂತುಂಡಿದ್ದು ಬೇಸರ ತರಿಸಲಾರಂಭಿಸಿತ್ತು. ಹಾಗಿರುವಾಗ ಒಂದು ದಿನ ಗೆಳೆಯರ ಜೊತೆ ಕದ್ದು ಮುಚ್ಚಿ ಕುಡಿದು ಮನೆಗೆ ಬಂದ. ಗಾರೆ ಕೆಲಸವಾಗಿದ್ದರಿಂದ ಊರಿನಲ್ಲಿಯೇ ಅಂತರ ಕಾಪಾಡಿಕೊಂಡು ಅಪ್ಪ ಕೆಲಸಕ್ಕೆ ಹೋಗುತ್ತಿದ್ದ. ಅಪ್ಪ ಮನಗೆ ಇಷ್ಟು ಬೇಗ ಬಂದಿರಲಿಕ್ಕಿಲ್ಲ. ಸಂಜೆ ಏಳು ಗಂಟೆಯ ಒಳಗೆ ಮನೆಯ ಒಳಗೆ ಸೇರಿ ಮಲಗಿ ಬಿಡಬೇಕು ಎಂದುಕೊಂಡ. ಆದರೆ ಆಗಲೇ ಸರ್ಕಾರ ಮತ್ತೆ ಕಟ್ಟು ನಿಟ್ಟಿನ ಕ್ರಮವನ್ನು ಮತ್ತೆ ಜಾರಿ ಮಾಡಿ ಮನೆಯಿಂದ ಯಾರೂ ಹೊರಗೆ ಹೋಗಬೇಡಿ ಎರಡನೇ ಅಲೆ ಬಂದಿದೆ ಅಂದುಬಿಟ್ಟಿತ್ತು. ಹಾಗಾಗಿ ತಂದೆ ಮನೆಯಲ್ಲಿಯೇ ಇದ್ದ ಎನ್ನುವದು ಗೊತ್ತಾಗದೆ ಮನೆಗೆ ಬಂದ ಹುಡುಗನಿಗೆ ಶಾಕ್ ಆಯ್ತು. 

ಮಗನ ಅವತಾರ ಕಂಡ ತಂದೆ ಅಂದು ಒಂದು ಮಾತನಾಡದೆ ಮನೆಯ ಒಳಗೆ ನಡೆದುಬಿಟ್ಟ. ಹೆಂಡತಿಯ ಜೊತೆ ಇದ್ದೊಬ್ಬ ಮಗ ಹೀಗೆ ಹಾಳಾಗ್ತಾ ಇದ್ದಾನಲ್ಲ. ಇವನು ವಿದ್ಯೆ ಕಲಿಲಿ ಅಂತ ನಾವಿಬ್ರು ದುಡ್ದಿದ್ದೆ ಬಂತು ಎಂದು ಬೇಸರ ತೋಡಿಕೊಂಡ. ಅದನ್ನು ಕೇಳಿಸಿಕೊಂಡ ಹುಡುಗನಿಗೆ ತನ್ನ ನಡತೆಯ ಬಗ್ಗೆ ಕೆಡುಕೆನಿಸಿತು. ಆದರೆ ಲಾಕ್‌ಡೌನ್ ಬಿಸಿ ಎಲ್ಲರಂತೆ ಇವರಿಗೂ ಇತ್ತು. ಅಂದು ಹೊದಿಕೆ ಮುಚ್ಚಿಕೊಂಡು ಸುಮ್ಮನೆ ಮಲಗಿಬಿಟ್ಟ. ವಾರವಾದರೂ ಅಪ್ಪನೆದುರು ಮುಖ ಕೊಟ್ಟು ಮಾತನಾಡುವ ಧೈರ್ಯ ಬರಲಿಲ್ಲ. ಅದರಲ್ಲಿ ಅಪ್ಪ ಮಗ ಇಬ್ಬರೂ ಮನೆಯಲ್ಲೇ ಇದ್ದರು. ಮತ್ತಷ್ಟು ಸಂಕಟವಾಯ್ತು. ತನ್ನ ಬಳಿ ಇದ್ದ ಪೋನ್ ತೆಗೆದುಕೊಂಡು ತನ್ನಂತೆ ಖಾಲಿ ಇರುವ ಗೆಳೆಯರಿಬ್ಬರಿಗೆ ಪೋನ್ ಮಾಡಿ ಎಲ್ಲ ವಿಚಾರ ಹೇಳಿ ಏನಾದರೂ ಉದ್ಯೋಗ ಮಾಡಬೇಕು ಅಂದ್ಕೊಂಡಿದ್ದಿನಿ ಅಂದ. ಅವರು ಅದು ನಿನ್ನಿಂದ ಆಗೋದಿಲ್ಲ. ಯಾವುದಾದ್ರು ಪ್ರವೇಟ್ ಶಾಲೆಯಲ್ಲಿ ಮಾಸ್ತರಿಕೆ ಸಿಗುತ್ತ ನೋಡು ಅಂದರು. ಪ್ರವೇಟ್ ಎನ್ನುವ ಒಂದು ಮಾತು ಆ ಹುಡುಗನಿಗೆ ಸಾಕಿತ್ತು. ಅವನ ಕಣ್ಣ ಮುಂದೆ ಮಕ್ಕಳ ಭವಿಷ್ಯ ಎದುರಾಯಿತು. ತಾನು ಹತ್ತನೇ ತರಗತಿಯವರೆಗಿನ ಮಕ್ಕಳಿಗೆ ಹೇಳೀಕೊಡುವಷ್ಟು ಕಲ್ತಿದ್ದೇನೆ. ಈಗ ಮಕ್ಕಳಿಗೆ ಶಾಲೆ ಬೇರೆ ಇಲ್ಲ. ಎಲ್ಲವೂ ಆನ್ ಲೈನ್ ಪಾಠ ನಡಿಯುತ್ತಿದೆ. ತಾನೇಕೆ ಮಕ್ಕಳಿಗೆ ಇಂಗ್ಲಿಷ್ ಮತ್ತು ಗಣಿತವನ್ನು ಅಕ್ಕ ಪಕ್ಕದವರಿಗೆ ಹೇಳಿಕೊಡಬಾರದು ಎಂದುಕೊಂಡವನು ಪಕ್ಕದ ಮನೆಯ ಒಬ್ಬನೇ ಹುಡುಗನಿಗೆ ಮೊದಲ ಪಾಠ ಶುರು ಮಾಡಿಯೇ ಬಿಟ್ಟ. ಎರಡನೇ ತರಗತಿಯ ಆ ಪುಟ್ಟ ಮಗು ಮಗ್ಗಿ ಹೇಳಲು ತೊದಲುತಿತ್ತು. ಒಂದೇ ತಿಂಗಳಲ್ಲಿ ಸರಸರನೇ ಮಗ್ಗಿ ಹೇಳಲಾರಂಭಿಸಿದ. ತಡ ಮಾಡದೇ ಮತ್ತೆರಡು ಹುಡುಗರನ್ನು ತನ್ನ ಪಾಠಕ್ಕೆ ಬರುವಂತೆ ನೋಡಿಕೊಂಡ. ಮಕ್ಕಳು ಹೆಚ್ಚಾದಂತೆ ಒಂದಷ್ಟು ಹಣ ಎಂದು ನಿಗದಿ ಮಾಡಿದ. ಮನೆ ಪಾಠದ ಜೊತೆಗೆ ಮಕ್ಕಳಿಗೆ ವಿವಿದ ಆಟ, ಕ್ರಾಪ್ಟ್‌ಗಳನ್ನು ಮಾಡುವುದು ಹೇಳಿಕೊಟ್ಟ.  ಮಕ್ಕಳು ಹೆಚ್ಚಿಗೆ ನೀರೀಕ್ಷೆ ಇಟ್ಟಂತೆ ಇವನಿಗೂ ಕಲಿಯಬೇಕಾಗಿ ಬಂತು. ಹಾಗಾಗಿ ತಾನು ಹೆಚ್ಚಿನದನ್ನು ಕಲಿತು ಮಕ್ಕಳಿಗೆ ಹೇಳಿಕೊಡಲಾರಂಭಿಸಿದ. ಈಗ ಆತ ಟ್ಯೂಶನ್ ಎನ್ನುವ ಶಾಲೆ ಪುಸ್ತಕವನ್ನೇ ಅಭ್ಯಾಸ ಮಾಡಿಸುವುದನ್ನು ಬಿಟ್ಟು ಶಾಲೆಯ ಪಠ್ಯಪುಸ್ತಕಕ್ಕೆ ಪೂರಕವಾಗಿರುವುದನ್ನು ಮಕ್ಕಳಿಗೆ ಹೇಳಿಕೊಡುತ್ತಾನೆ. ಅದರಿಂದ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ನಡೆಯುತ್ತಿದೆ. ವಿಶೇಷ ಎಂದರೆ ಪ್ರತೀ ಶನಿವಾರ ಮಕ್ಕಳನ್ನು ಮಣ್ಣಿನಲ್ಲಿ ಆಡಲು ಬಿಡುತ್ತಾನೆ. ಹಳೆಯ ಆಟಗಳಾದ ಚಿನ್ನಿದಾಂಡು, ಕಣ್ಣಾಮುಚ್ಚಲೆ, ಲಗೋರಿ, ಚನ್ನೆಮಣೆ ಇಂಥಹ ಆಟವನ್ನೇ ಆಡಬೇಕು ಎಂದು ಹೇಳಿ ಆಡಿಸುತ್ತಾನೆ. ಶನಿವಾರ ಟಿವಿ, ಮೊಬೈಲ್ ಮುಂದೆ ಕೂರುವ ಮಕ್ಕಳು ಈಗ ಅವನ ಮನೆಯ ಅಂಗಳದಲ್ಲಿ ಆಡುತ್ತವೆ. ಅವನ ಅಮ್ಮನನ್ನು ಕೇಳಿದರೆ ಮಕ್ಕಳು ಆಡಿದಾಗ ಅಂಗಳ ಎಲ್ಲ ಗಲೀಜಾಗುತ್ತೆ. ಆದರೆ ಮಕ್ಕಳು ಖುಷಿಯಿಂದ ಆಟ ಆಡಿ ಮನೆಗೆ ಹೋಗುವಾಗ ನನಗೆ ಟಾಟಾ ಎಂದು ಕೈ ಬೀಸುವಾಗ ಮಗನ ಸ್ವಂತ ದುಡಿಮೆಯ ಶ್ರಮ ಅರ್ಥವಾಗುತ್ತೆ ಎನ್ನುತ್ತಾರೆ. ಇತ್ತಿತ್ತಲಾಗೆ ತನ್ನನ್ನು ಸಮಾಜ ಸೇವೆಯಲ್ಲಿ ಕೂಡ ತೊಡಗಿಸಿಕೊಂಡ ಹುಡುಗ ಅಪ್ಪನ ಎದುರು ಧೈರ್ಯವಾಗಿ ನಿಲ್ಲಬಲ್ಲ. 

ಒಂದೇ ಒಂದು ಕ್ಷಣದ ನಿರ್ಧಾರ ಜೀವನದ ದಿಕ್ಕನ್ನೇ ಬದಲಿಸಿ ಬಿಡುತ್ತದೆ. ಯಾರು ಹುಟ್ಟಿನಿಂದ ಶ್ರೀಮಂತರಲ್ಲ. ಹಾಗೆ ಶ್ರೀಮಂತರಾಗಿದ್ದರೆ ಅದಕ್ಕೆ ಅಷ್ಟೊಂದು ಬೆಲೆಯೂ ಇಲ್ಲ. ನಾವು ಮಾಡುವ ಒಂದೊಂದು ಕ್ಷಣದ ಕೆಲಸವೂ ನಮ್ಮನ್ನು ಮೇಲೆ ಎತ್ತುತ್ತದೆ. ನಮ್ಮ ಕೆಲಸಗಳೆ ಮುತ್ತುಗಳಾಗಿ ಹೊಳೆದು ಖುಷಿಕೊಡುತ್ತದೆ. ಸಾರ್ಥಕತೆಯ ಮುತ್ತುಗಳು ನಮ್ಮ ಕೈನಲ್ಲಿದ್ದಾಗ ಆಗುವ ಖುಷಿ ಬಹಳಷ್ಟು.  

‘ಹುಟ್ಟು ಸಾವುಗಳ ಮಧ್ಯ ಇದ್ದ ಬದುಕನೇತಕೆ ಹಾಳು ಮಾಡುವೆ ಮನುಜ, ನಿತ್ಯ ಕಾಯಕವ ಮಾಡಿ ಸತ್ಯತೆಯಲಿ ಜಯಗಳಿಸಿ ಗೆದ್ದು  ಬೀಗೋ ತನುಜ.’  

- * * * -