ಹಾವು ಕಚ್ಚುವಿಕೆಯಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು: ಡಾ. ಮರಿಯಂಬಿ

ಹಾವು ಕಚ್ಚುವಿಕೆಯಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು: ಡಾ. ಮರಿಯಂಬಿ  Immediate hospitalization is essential to prevent fatalities and complications from snakebites: Dr.

ಲೋಕದರ್ಶನ ವರದಿ 

ಬಳ್ಳಾರಿ, ಸೆ.19 (ಕರ್ನಾಟಕ ವಾರ್ತೆ): ಹಾವು ಕಚ್ಚಿದಾಗ ಯಾವುದೇ ಕಾರಣಕ್ಕೂ ಗಾಬರಿಯಾಗದೆ, ನಾಟಿ ವೈದ್ಯರ ಮೊರೆ ಹೋಗದೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಮೂಲಕ ಸಾವು-ನೋವುಗಳನ್ನು ತಪ್ಪಿಸಬಹುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ.ಕೆ. ತಿಳಿಸಿದರು.  

ನಗರದ ರೇಡಿಯೋ ಪಾರ್ಕ್ನ ಹಾಸ್ಮಿ ಶಿಕ್ಷಣ ಸಂಸ್ಥೆಯ ಶಾಲಾ ಸಭಾಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಹಾಸ್ಮಿ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಹಾವು ಕಚ್ಚುವಿಕೆ ಜಾಗೃತಿ ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ಪ್ರತಿ ವರ್ಷ ಸೆ.19ರಂದು ಅಂತಾರಾಷ್ಟ್ರೀಯ ಹಾವು ಕಚ್ಚುವಿಕೆ ಜಾಗೃತಿ ದಿನ ಆಚರಿಸಲಾಗುತ್ತದೆ. ಹಾವು ಕಚ್ಚುವಿಕೆಯಿಂದ ಉಂಟಾಗುವ ಅಪಾಯ, ತಕ್ಷಣದ ವೈದ್ಯಕೀಯ ಚಿಕಿತ್ಸೆಯ ಮಹತ್ವ ಹಾಗೂ ಹಾವು ಕಚ್ಚಿದ ಬಳಿಕ ಉಂಟಾಗಬಹುದಾದ ದೀರ್ಘಕಾಲೀನ ಅಂಗವೈಕಲ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ದಿನಾಚರಣೆಯ ಉದ್ದೇಶವಾಗಿದೆ ಎಂದರು.  

ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಸೆಕ್ಷನ್‌-3ರಡಿ ಹಾವು ಕಚ್ಚುವಿಕೆಯನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗಿದೆ. ನಾಗರಹಾವು, ಕೊಳಕುಮಂಡಲ, ಕಟ್ಟಾವು ಹಾಗೂ ಗರಗಸ ಮಂಡಲ ಹಾವುಗಳು ವಿಷಪೂರಿತವಾಗಿದ್ದು, ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ಕಚ್ಚುವಿಕೆಗೆ ಅಗತ್ಯ ಓಷಧಗಳು ಲಭ್ಯವಿವೆ ಎಂದು ಮಾಹಿತಿ ನೀಡಿದರು.