ಅಕ್ರಮ ಸಾಗಣೆ: 13.54 ಟನ್ ಪಡಿತರ ಅಕ್ಕಿ ವಶ

ಅಕ್ರಮ ಸಾಗಣೆ: 13.54 ಟನ್ ಪಡಿತರ ಅಕ್ಕಿ ವಶ  Illegal transport: 13.54 tonnes of PDS rice seized

ಲೋಕದರ್ಶನ ವರದಿ 

ಜಮಖಂಡಿ 11:  ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಸಮೀಪದ ನಾಗನೂರು ಗ್ರಾಮದ ಬಳಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಲಾರಿಗೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ 13,540 ಕೆ.ಜಿ. ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.  

ಸರ್ಕಾರದ ವಿವಿಧ ಯೋಜನೆಗಳಡಿ ಸಾರ್ವಜನಿಕರಿಗೆ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಪಡೆದು, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.  

ದಾಳಿಯ ವೇಳೆ 244 ಗೋಣಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಒಟ್ಟು 13,540 ಕೆ.ಜಿ. ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ ರೂ3,04,650 ಎಂದು ತಿಳಿದುಬಂದಿದೆ.  

ಪ್ರಕರಣಕ್ಕೆ ಸಂಬಂಧಿಸಿದಂತೆ ಜಮಖಂಡಿ ನಗರದ ಅಸ್ಪಾಕ್ ಮುಬಾರಕ್ ಅವಟಿ ಹಾಗೂ ಅಸ್ಪಾಕ್ ಅಬ್ದುಲ್ಜಬ್ಬಾರ್ ಬಿರಾದಾರ್ ಎಂಬ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಸವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.  

ದಾಳಿ ಕಾರ್ಯಾಚರಣೆಯಲ್ಲಿ ಆಹಾರ ಶಿರಸ್ತೇದಾರ್ ಬಸವರಾಜ ತಾಳಿಕೋಟಿ, ಗ್ರಾಮ ಆಡಳಿತ ಅಧಿಕಾರಿಗಳಾದ ದದಾನಂದ ಕಿತ್ತೂರು ಹಾಗೂ ಭರತ ವಾಘಮೋಡೆ, ಎಎಸ್‌ಐ ಆರಿ​‍್ಬ. ಕೋಳಿ ಮತ್ತು ಪೊಲೀಸ್ ಸಿಬ್ಬಂದಿ ಶಿವಾನಂದ ಭಜಂತ್ರಿ ಭಾಗವಹಿಸಿದ್ದರು.