ಕೂನಬೇವು ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ: ಎಚ್ಚೆತ್ತ ಗ್ರಾಮಸ್ಥರು ಅಧಿಕಾರಿಗಳ ಸಹಕಾರದಿಂದ ಬಂದ ಮಾಡುವಲ್ಲಿ ಯಶಸ್ವಿ

ಕೂನಬೇವು ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ: ಎಚ್ಚೆತ್ತ ಗ್ರಾಮಸ್ಥರು ಅಧಿಕಾರಿಗಳ ಸಹಕಾರದಿಂದ ಬಂದ ಮಾಡುವಲ್ಲಿ ಯಶಸ್ವಿ Illegal liquor sale in Koonabevu village: Alert villagers succeed in stopping it with the cooperatio

ರಾಣೇಬೆನ್ನೂರು 24:  ತಾಲೂಕಿನ ಕೂನಬೇವು ಗ್ರಾಮ ಹಾಗೂ ಪ್ಲಾಟಿನಲ್ಲಿ ಕಳೆದ ಹಲವು ದಶಕಗಳಿಂದ ಬೀಡಾ ಅಂಗಡಿ, ಚಹಾದಂಗಡಿ, ಕಿರಾಣಿ ಅಂಗಡಿ ಸೇರಿದಂತೆ 8 ರಿಂದ 10 ಅಂಗಡಿಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಅವ್ಯಾಹತವಾಗಿ ನಡೆಯುತ್ತಲೇ ಇತ್ತು. ಇತ್ತೀಚೆಗೆ ಕುಡಿತದ ಚಟಕ್ಕೆ ದಾಸರಾಗಿದ್ದ ಹಲವು ವಿವಾಹಿತ ಮತ್ತು ಅವಿವಾಹಿತ ಯುವಕರ ಸಾಲು ಸಾಲು ಸಾವಾಯಿತು. ಇದರಿಂದ ಎಚ್ಚೆತ್ತುಕೊಂಡ ಪ್ರಜ್ಞಾವಂತ ಗ್ರಾಮಸ್ಥರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಸಾರಾಯಿ ಮಾರಾಟ ಮಾಡುವವರಿಗೆ ಎಚ್ಚರಿಕೆ ನೀಡಿ ಬಂದ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಮತ್ತೆ ಸಾರಾಯಿ ಮಾರಾಟ ಮಾಡಿದರೆ ದಂಡವನ್ನೂ ಸಹ ವಿಧಿಸುವ ಕಟ್ಟೆಚ್ಚರಿಕೆ ನೀಡಿದ್ದಾರೆ.  

ಹೌದು! ಕೂನಬೇವು ಒಂದು ಚಿಕ್ಕ ಗ್ರಾಮವಾಗಿದ್ದು, ಕೇವಲ 1200 ರಿಂದ 1400 ಮತಗಳಿವೆ. ಇಂತಹ ಚಿಕ್ಕ ಗ್ರಾಮದಲ್ಲಿ ಎಂಟ್ಹತ್ತು ಅಂಗಡಿಯವರು ಹಗಲು ರಾತ್ರಿಯೆನ್ನದೆ ಎಗ್ಗಿಲ್ಲದೆ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದರು. ಅದರಲ್ಲಿ ಕೆಲವು ಅಂಗಡಿಗಳು ಶಾಲೆ, ದೇವಸ್ಥಾನಗಳ ಪಕ್ಕದಲ್ಲಿಯೇ ಇದ್ದವು ಎಂದು ಗ್ರಾಮಸ್ಥರು ಹೇಳುತ್ತಾರೆ. ಇವರು ಅನಧಿಕೃತವಾಗಿ ಮಾರಾಟ ಮಾಡುವ ಸಾರಾಯಿಗೆ ಮೊದಲು ಬಲಿಯಾದವರೇ ಬಾಳಿ ಬದುಕಬೇಕಾದ ಯುವ ಕಣ್ಮಣಿಗಳು. ವಯಸ್ಸಾದ ತಂದೆ-ತಾಯಂದಿರಿಗೆ ಆಸರೆಯಾಗಬೇಕಿದ್ದ ಮಕ್ಕಳು ಪಾಲಕರ ಮುಂದೆಯೇ ಮರಣ ಹೊಂದಿದರೆ ಅವರ ಗತಿಯೇನು? ಎಂದು ಪ್ರಶ್ನಿಸಿದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.  

ಕೆಲಸ ಕಾರ್ಯ ಮರೆತ ಕೆಲವು ಯುವಕರು ತಂದೆ-ತಾಯಿ, ಹೆಂಡತಿಯರನ್ನು ಕಾಡಿ ಬೇಡಿ ದುಡ್ಡು ಕಿತ್ತುಕೊಂಡು ಬಂದು ಹಾಡು ಹಗಲಲ್ಲಿಯೇ ಸಾರಾಯಿ ಕುಡಿದು ತೂರಾಡುತ್ತ ದೇವಸ್ಥಾನ, ಆಲದಕಟ್ಟಿ, ಆಫೀಸ್ ಕಟ್ಟೆಯ ಮೇಲೆ ಮಲಗುತ್ತಿದ್ದರು. ಇದರಿಂದ ಗ್ರಾಮದ ಶಾಂತಿ ಹಾಗೂ ಸ್ವಾಸ್ಥ್ಯ ಸಂಪೂರ್ಣ ಹಾಳಾಗಿತ್ತಲ್ಲದೆ, ಮನೆ-ಮನಗಳಲ್ಲಿ ಶಾಂತಿ, ನೆಮ್ಮದಿ ಇಲ್ಲದಾಗಿತ್ತು. ಕೂನಬೇವು ಗ್ರಾಮದಲ್ಲಿ ಈ ಹಿಂದೆ ಹಲವು ಬಾರಿ ಸಾರಾಯಿ ಮಾರಾಟ ಬಂದ್ ಆಗಿತ್ತು. ನಿಷೇಧವಾಗಿ ಕೇವಲ ಕೆಲವೇ ದಿನಗಳಲ್ಲಿ ಬಂದ್ ಮಾಡಿಸಲು ಮುಂಚೂಣಿಯಲ್ಲಿದ್ದವರ ಮನೆಯಲ್ಲಿಯೇ ಮದ್ಯ ಮಾರಾಟ ಶುರು ಮಾಡಿದ್ದರು ಎಂದು ಗ್ರಾಮದ ಶಿಕ್ಷಣ ಪ್ರೇಮಿ ಸತೀಶ ಅಣಜಿ ಆರೋಪಿಸಿದ್ದಾರೆ.  

ಗ್ರಾಮದ ಯುವಕರ ಭವಿಷ್ಯ ಭವ್ಯವಾಗಬೇಕಾದರೆ ಮೊದಲು ಅಕ್ರಮ ಸಾರಾಯಿ ಮಾರಾಟ ನಿಲ್ಲಬೇಕು ಎಂದು ನಿರ್ಧರಿಸಿದ ಕರಿಯಮ್ಮ ದೇವಿ ಹಾಗೂ ಬಸವೇಶ್ವರ ದೇವಸ್ಥಾನ ಸಮಿತಿಯ ಸದಸ್ಯರುಗಳಾದ ಶೇಖಪ್ಪ ಮಾಸಣಗಿ, ನಾಗರಾಜ ಕಾಕೋಳ, ಕಿರಣ ಅಣಜಿ, ಕರಬಸಪ್ಪ ರಾಜೋಳದ, ಬಸವರಾಜ ಅಣಜಿ, ಸಣ್ಣಪ್ಪ ಬ್ಯಾಡಗಿ, ಮಂಜುನಾಥ ಜ್ಯೋತಿ, ಬಸವರಾಜ ಚಿಗಳ್ಳಿ, ವಿರುಪಾಕ್ಷಪ್ಪ ಬಣಕಾರ, ಚನ್ನಬಸನಗೌಡ ಪಾಟೀಲ, ಲಕ್ಕಪ್ಪ ಅಣಜಿ, ಚನ್ನವೀರ​‍್ಪ ಅಣಜಿ, ಚಂದ್ರು ಗುಳೇದ ಹಾಗೂ ಗ್ರಾಮದ ಪ್ರಮುಖರು ಒಟ್ಟುಗೂಡಿ ಯಾವುದೇ ಕಾರಣಕ್ಕೂ ಸಹ ಊರಿನಲ್ಲಿ ಸಾರಾಯಿ ಮಾರಾಟಕ್ಕೆ ಅನುವು ಮಾಡಿ ಕೊಡುವುದಿಲ್ಲ ಎಂದಿದ್ದಾರೆ.