ಅಕ್ರಮ-ಸಕ್ರಮ: ಮುಖ್ಯಮಂತ್ರಿ ನೇತೃತ್ವದಲ್ಲಿ ಮಹತ್ವದ ಸಭೆ

ಬೆಂಗಳೂರು, ಏ.17,ಕಂದಾಯ ಇಲಾಖೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ  ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಅಕ್ರಮ ಸಕ್ರಮ ಸಂಬಂಧ ಮುಖ್ಯಮಂತ್ರಿಗಳ ಗೃಹ  ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿಂದು ಸಭೆ ನಡೆಯಿತು.ಈ ಹಿಂದೆ ಅಕ್ರಮ ಸಕ್ರಮದ ಕುರಿತಂತೆ ಸಂಪುಟ ಉಪಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದ ವರದಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಅಕ್ರಮ  ಸಕ್ರಮ ವಿಚಾರದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಇರುವ ಪ್ರಕರಣಗಳನ್ನು ಹಿಂಪಡೆದ ಬಳಿಕ  ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು‌ ಚರ್ಚಿಸಲಾಯಿತು. ಇದಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರಕರಣ  ವಾಪಸ್ ತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿದರು.  ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಕ್ರಮ ಸಕ್ರಮ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.ಕೇಸ್ ವಾಪಸ್ ತೆಗೆದುಕೊಂಡ ಬಳಿಕ ಸಕ್ರಮ ಮಾಡುವ ನಿರ್ಧಾರ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ  ಯಡಿಯೂರಪ್ಪ ತೀರ್ಮಾನಿಸಿದರು ಎನ್ನಲಾಗಿದೆ.ಸಭೆಯಲ್ಲಿ ಉಪಮುಖ್ಯಮಂತ್ರಿ ಅಶ್ವಥನಾರಾಯಣ್,  ಕಂದಾಯ ಸಚಿವ ಆರ್.ಅಶೋಕ್, ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ,  ಬಿಬಿಎಂಪಿ, ಬಿಡಿಎ ಆಯುಕ್ತರು ಭಾಗಿಯಾಗಿದ್ದರು.