ಸತ್ಯವಂತರ ಸಂಘದಲ್ಲಿ ಜೀವನ ಸಾಗಿಸಿದರೆ ಎಂದೆಂದಿಗೂ ಜೀವನ ಪಾವನ

ಸತ್ಯವಂತರ ಸಂಘದಲ್ಲಿ ಜೀವನ ಸಾಗಿಸಿದರೆ ಎಂದೆಂದಿಗೂ ಜೀವನ ಪಾವನ If you live in the company of the truthful, your life will be pure forever

                      ರಾಣೆಬೆನ್ನೂರು : 29 ಮಡಿಕೆ ತಯಾರಿಕೆಗೆ  ಮಣ್ಣು ಬೇಕು, ಆಭರಣ ತಯಾರಿಕೆಗೆ  ಹೊನ್ನು ಬೇಕು. ಇವೆರಡೂ ಇಲ್ಲ ಅಂದರೆ ಮಡಕೆ ಮತ್ತು ಆಭರಣ ಇಲ್ಲವೇ ಇಲ್ಲ.  ಶಿವ ಅಂದರೆ ಶಾಂತಿ. ಶಾಂತಿ ಎಲ್ಲರಿಗೂ ಬೇಕು. ಶಾಂತಿ ಮತ್ತು ನೆಮ್ಮದಿ ಮಾನವನ ಬದುಕಿಗೆ ನಿರಂತರ ದಾರೀದೀಪವಾಗಬೇಕಾಗಿದೆ ಎಂದು ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಶ್ರೀ ಚನ್ನವೀರ ಶಿವಯೋಗಿಗಳವರು ನುಡಿದರು. ಅವರು ರವಿವಾರ ಇಲ್ಲಿನ ಶಿ ಆದಿಶಕ್ತಿ ದೇವಸ್ಥಾನದ ಸಭಾಭವನದಲ್ಲಿ ತಾಲೂಕ  ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘವು ಆಯೋಜಿಸಿದ್ದ, ನೂತನ2026 ನೇ ಸಾಲಿನ ದಿನಚರಿ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.   

                     ಬೆಳಕು ಕೊಡುವವನು ಗುರು. ಗುರುವಿನ ಮಾರ್ಗದರ್ಶನ ಬೇಕು. ಗುರುವಿನ ಮಾರ್ಗ ದರ್ಶನದ  ಕೊರತೆಯಿಂದ ಇಂದು ನಾವೆಲ್ಲರೂ ಜ್ಞಾನವಿಮು ಕರಾಗುತ್ತಿದ್ದೇವೆ. ಪ್ರತಿಯೊಬ್ಬರಿಗೂ  ಜ್ಞಾನ ಬಹು ಮುಖ್ಯ. ಸಮಾಜ ಸಂಘಟನೆಯಾದರೆ ಇವೆಲ್ಲವೂ ಅರಿವು ಪಡೆಯಲು ಸಾಧ್ಯವಾಗುವುದು ಎಂದರು. ಬಣಜಿಗ ಸಮಾಜದ ಜನರು ತಮ್ಮ ದಿನ ನಿತ್ಯದ ವ್ಯವಹಾರಿಕ ಬದುಕಿನಲ್ಲಿ  ಶಿಸ್ತಿನ ಜೀವನವನ್ನು ನಡೆಸುವವರಾಗಿದ್ದಾರೆ, ಭವಿಷ್ಯದ ಮಕ್ಕಳಿಗೆ ಇಂತಹ ಸಂಸ್ಕೃತಿಯ, ಸಂಸ್ಕಾರದ ಅರಿವಿನ  ಪಾಠ ಬೇಕಾಗಿದೆ. ಸತ್ಯವಂತರ ಸಂಘದಲ್ಲಿ ಜೀವನ ಸಾಗಿಸಿದರೆ ಎಂದೆಂದಿಗೂ ಜೀವನ ಪಾವನವಾಗುವುದು ಎಂದು ಶಿವಯೋಗಿಗಳು  ನುಡಿದರು.

                      ದೀನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಪ್ರಕಾಶ ಕೋಳಿವಾಡ ಅವರು ಸಮಾಜದಲ್ಲಿ ಸಂಘಟನೆ ಬಹು ಮುಖ್ಯ. ಪ್ರತಿಯೊಬ್ಬ ಮಾನವನು  ಸಂಘಜೀವಿಯಾಗಿದ್ದಾನೆ ಹಿಗಿರುವಾಗ ಜಾತಿ, ಮತ,  ಪಂಥ, ಭೇದ, ಭಾವ,ಪಕ್ಷ ಪಂಗಡ ಎನ್ನುವ ಮಾತು ಸಲ್ಲದು. ತಾವು ಪ್ರಮಾಣವಚನ ಸ್ವೀಕರಿಸಿದ್ದು ಬುದ್ಧ, ಬಸವ,ಅಂಬೇಡ್ಕರ್ ಅವರ ಹೆಸರಿನಲ್ಲಿ ಸಮಾನತೆ,  ಶಾಂತಿ ಮತ್ತು ನೆಮ್ಮದಿ ಜೀವನವನ್ನು ಎಲ್ಲರೂ ಸಾಗಿಸಬೇಕು ಎನ್ನುವ ಸಿದ್ಧಾಂತ ತಮ್ಮದಾಗಿದೆ ಎಂದರು.  ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ, ಅರುಣಕುಮಾರ ಪೂಜಾರ ಅವರು ಸಮಾಜದಲ್ಲಿ ಬದುಕಿ ಬಾಳುವ ಪ್ರತಿಯೊಬ್ಬರು ಮಾನವ ಜೀವಿಗಳು. ಹೀಗಿರುವಾಗ ವೀರಶೈವ ಮತ್ತು ಲಿಂಗಾಯತ ಎನ್ನುವ ಭೇದ ಭಾವವೇಕೆ?. ತಾರತಮ್ಯ ಹೋಗಲಾಡಿಸಿ ಅಖಂಡ ವೀರಶೈವ ಲಿಂಗಾಯತ ಒಂದಾಗಬೇಕಾಗಿದೆ ಎಂದು ಪ್ರತಿಪಾದಿಸಿದರು.

                     ಇಂದು ಸಮಾಜದ ಸಮುದಾಯ ಭವನದ ನಿರ್ಮಾಣ ಅಗತ್ಯವಿದ್ದು, ಅದಕ್ಕಾಗಿ ಆಡಳಿತದಲ್ಲಿರುವ ಶಾಸಕರು, ಪ್ರಾಧಿಕಾರದ ಅಧ್ಯಕ್ಷರು ಸಿಎ ಸೈಟು  ಒದಗಿಸಲು ಮುಂದಾಗಬೇಕು, ಅದಕ್ಕೆ ತಗಲುವ ಎಸ್ ಆರ್ ದರವನ್ನು ತಾವು ಭರಿಸುವುದಾಗಿ  ಅರುಣಕುಮಾರ ಅವರು ಭರವಸೆ ನೀಡಿದರು. ಸಮಾರಂಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ವರ್ತಕ, ದೇವಸ್ಥಾನ ಸಮಿತಿ ಅಧ್ಯಕ್ಷ ಪೂರ್ಣಚಂದ್ರ ಗುಪ್ತಾ ಮತ್ತಿತರರು ಮಾತನಾಡಿದರು.   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಿಂಗರಾಜ ಬಿಳಗಿ ಅವರು, ಮಾತನಾಡಿದರು. ಇದೇ ಸಂದರ್ಭದಲ್ಲಿ ಯುನೈಟೆಡ್ ಇನ್ಶೂರೆನ್ಸ್‌ ಕಂಪನಿಯ ನೌಕರರಾದ ಶರಣಬಸಪ್ಪ ರುದ್ರ​‍್ಪ ವಿರೂಪಣ್ಣನವರ ಮತ್ತು ವಿದೇಶದಲ್ಲಿ ವ್ಯಾಸಂಗ ಸಾಧಕಿ, ಗುರುಶಾಂತಮ್ಮ ಕಟಗಿಹಳ್ಳಿ ಹಾಗೂ ದೀನದರ್ಶಿಕೆ ಮುದ್ರಣ ದಾನಿಗಳನ್ನು  ಅಭಿನಂದಿಸಿ ಸನ್ಮಾನಿಸಲಾಯಿತು.

                        ವೇದಿಕೆಯಲ್ಲಿ ಉಪಾಧ್ಯಕ್ಷ ಮುರಿಗೆಪ್ಪ ಕಬ್ಬೂರು, ಸದಾಶಿವಪ್ಪ ನಾಗನೂರು ಅಧ್ಯಕ್ಷ ಸಂಗನಬಸಪ್ಪ ಶೆಟ್ಟರ್,  ಕಾರ್ಯದರ್ಶಿ ವೀರೇಂದ್ರ ಬಿಳಗಿ, ಮೃತ್ಯುಂಜಯ ಹೊದಿಗ್ಗೇರಿ, ಪೂಜಾ ವಿರೂಪಣ್ಣನವರ, ಪ್ರೇಮಾ ವಾಲಿಶೆಟ್ಟರ, ಗೌರಾ ಚಂದಾಪುರ, ಸರೋಜಾ ಹುಲಿಹಳ್ಳಿ, ಜಗದೀಶ್ ಕಲ್ಯಾಣಿ, ಸೇರಿದಂತೆ ಸಮಾಜದ ಮತ್ತಿತರ ಗಣ್ಯರು, ಮುಖಂಡರು  ಉಪಸ್ಥಿತರಿದ್ದರು. ಶ್ರೀಮತಿ ಶ್ರೀದೇವಿ ಉದಾಸಿ ಸಂಗಡಿಗರು ಪ್ರಾರ್ಥಿಸಿದರು. ಪ್ರೊ, ಕೊಟ್ರೇಶ್ ಕಟ್ಟಿಗಿಹಳ್ಳಿ ಸ್ವಾಗತಿಸಿ, ಅಧ್ಯಕ್ಷ ಬಾಬಣ್ಣ ಐರಣಿ ಶೆಟ್ಟರ್ ಪ್ರಾಸ್ತಾವಿಕವಾಗಿ  ಮಾತನಾಡಿದರು. ಪ್ರೊ,ಪ್ರಭು ಕೋಡದ, ಪ್ರೊ, ಜಿ.ವ್ಹಿ.ಕೋರಿ ನಿರೂಪಿಸಿ, ಎಸ್‌. ಜಿ. ಮುಂಡರಗಿ ವಂದಿಸಿದರು. ಕಾರ್ಯಕ್ರಮದಲ್ಲಿ ಬಣಜಿಗ  ಸಮುದಾಯದ 500ಕ್ಕೂ ಹೆಚ್ಚು ನಾಗರಿಕರು, ಮಹಿಳೆಯರು  ಪಾಲ್ಗೊಂಡಿದ್ದರು.