ಯುವಜನತೆ ಮನಸ್ಸು ಮಾಡಿದರೆ ದೇಶದ ಚಿತ್ರಣವನ್ನೆ ಬದಲಿಸಬಹುದು : ಡಾ.ಜಾವೀದ್ ಜಮಾದಾರ

ಯುವಜನತೆ ಮನಸ್ಸು ಮಾಡಿದರೆ ದೇಶದ ಚಿತ್ರಣವನ್ನೆ ಬದಲಿಸಬಹುದು : ಡಾ.ಜಾವೀದ್ ಜಮಾದಾರ If the youth put their mind to it, they can change the image of the country: Dr. Javed Jamadar

ಲೋಕದರ್ಶನ ವರದಿ 

ವಿಜಯಪುರ 25:  ಸಮಾಜದ ಸಮಗ್ರ ಅಭಿವೃದ್ಧಿಗೆ ಮಹಿಳೆಯರ ಸಬಲೀಕರಣ ಅತ್ಯಾವಶ್ಯಕವಾಗಿದ್ದು, ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆಯನ್ನು ಅರಿತು ಮುಂದಾಗಬೇಕು ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಮತ್ತು ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಭಾರತ ಸರಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಇವರ ಸಹಯೋಗದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಎನ್‌.ಎಸ್‌.ಎಸ್ ರಾಜ್ಯಮಟ್ಟದ ಮಹಿಳಾ ಯುವಜನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ದೇಶವನ್ನು ಅಭಿವೃದ್ಧಿಪಡಿಸುವಲ್ಲಿ ನಾವೆಲ್ಲರೂ ಒಂದು ಹೆಜ್ಜೆ ಮುಂದೆ ಇಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸ್ತ್ರೀ ಸಂಬಂಧಿತ ವಿಷಯಗಳ ಬಗ್ಗೆ ಸಮಾಜದಲ್ಲಿ ಸಮಗ್ರ ಜಾಗೃತಿ ಮೂಡಿಸುವ ಅಗತ್ಯವಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನು ಪಡೆದು ಮುನ್ನಡೆಯಲು ಸಾಧ್ಯವಾಗುವಂತೆ ಪ್ರೋತ್ಸಾಹ ನೀಡಬೇಕು. ಮಹಿಳಾ ಸಬಲೀಕರಣವು ಕೇವಲ ಕುಟುಂಬದಷ್ಟೇ ಅಲ್ಲ, ಸಮಗ್ರ ಸಮಾಜದ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ಹೇಳಿದರು. 

  ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಎನ್‌.ಎಸ್‌.ಎಸ್ ಸಲಹಾ ಸಮಿತಿ ಸದಸ್ಯ ಡಾ.ಜಾವೀದ್ ಜಮಾದಾರ ಮಾತಾನಾಡಿ, ಯುವಜನತೆ ಮನಸ್ಸು ಮಾಡಿದರೆ ದೇಶದ ಚಿತ್ರಣವನ್ನೆ ಬದಲಿಸಬಹುದು ಬದಲಾದ ಜೀವನ ಶೈಲಿ ಒತ್ತಡಗಳಿಂದ ಜೀವನ ಮೌಲ್ಯಗಳು ಅಪಾಯದ ಅಂಚಿಗೆ ಸರಿಯುತ್ತಿದೆ. ಯುವಕರು ದೇಶದ ಭವ್ಯ ಸಂಸ್ಕೃತಿಯಿಂದ ವಿಮುಖವಾಗಬಾರದು ಎಂದು ಸಲಹೆ ನೀಡಿದರು. 

ಎನ್‌.ಎಸ್‌.ಎಸ್ ಮೂಲಕ ಯುವ ಜನತೆ ಶ್ರಮದಾನ ಸ್ವಯಂ ಸೇವೆಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಯುವ ಸಮುದಾಯ ತಮ್ಮ ಕೊಡುಗೆ ನೀಡಿ ನಮ್ಮ ಸಂಸ್ಕೃತಿಯ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.  ಇದೇ ಸಂದರ್ಭದಲ್ಲಿ ಯುವ ನಾಯಕಿ ಭವಾನಿ ರಾಜು ಆಲಗೂರ ಮಾತನಾಡಿ ಯುವಕರು ತಮ್ಮ ಹೆಚ್ಚಿನ ಸಮಯವನ್ನು ಅಭಿವೃದ್ದಿ ಕಡೆಗೆ ಚಿಂತಿಸಬೇಕಾಗಿದೆ. ಯುವ ಶಕ್ತಿಯ ಸದುಪಯೋಗ ಆಗಬೇಕಾಗಿದೆ. ತಮ್ಮ ಸುತ್ತುಮುತ್ತಲಿನ ಪರಿಸರದಲ್ಲಿ ಆಗುತ್ತಿರುವ ಸಾಮಾಜಿಕ ಕಲ್ಯಾಣಕ್ಕಾಗಿ ಯುವ ಜನತೆ ತಮ್ಮದೆ ಆದ  ಕೊಡುಗೆ ನೀಡಬೇಕು ಎಂದರು.  

ಕಾರ್ಯಕ್ರಮದಲ್ಲಿ  ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಎಸ್‌.ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಸವರಾಜ ಎಲ್‌. ಲಕ್ಕಣ್ಣವರ,  ವಿಜಯಪುರ ಜಿಲ್ಲಾ ಮೀನುಗಾರರ ವಿಭಾಗದ ಕಾರ್ಯದರ್ಶಿ ಕೃಷ್ಣಾ ಕೆ. ಎಚ್, ಮಹಿಳಾ ವಿವಿ ಸಿಂಡಿಕೇಟ್‌ನ ಮಾಜಿ ಸದಸ್ಯ ಆರ್‌.ಸಿ.ಪಾಟೀಲ, ಪ್ರೊ ರಾಜಕುಮಾರ ಪಿ. ಮಾಲಿಪಾಟೀಲ, ಪ್ರೊ. ಅಶೋಕ ಸುರಪುರ ಮತ್ತು ವಿವಿಧ ವಿಭಾಗದ ಪ್ರಾಧ್ಯಾಪಕರು ಮತ್ತು ಶಿಬಿರಾರ್ಥೀಗಳು ಉಪಸ್ಥಿತರಿದ್ದರು.  ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಪ್ರಕಾಶ ಸಣ್ಣಕ್ಕನವರ, ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು, ಡಾ. ಕಲಾವತಿ ಕಾಂಬಳೆ, ಅತಿಥಿಗಳನ್ನು ಪರಿಚಯಿಸಿದರು,  ಡಾ. ಭಾಗ್ಯಶ್ರೀ ದೊಡ್ಡಮನಿ ವಂದಿಸಿದರು, ಸಲಮಾ ಮಳಗಿ ನಿರೂಪಿಸಿದರು.