ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಸರಿಯಾದರೆ ಎಸ್.ಎಸ್.ಎಲ್.ಸಿ.ಉತ್ತಮ ಫಲಿತಾಂಶ ಸಾಧ್ಯ: ಸಭಾಪತಿ ಬಸವರಾಜ ಹೊರಟ್ಟಿ
If the primary education system is right, good SSLC results are possible: Speaker Basavaraj Horatti
ಲೋಕದರ್ಶನ ವರದಿ
ಹಾವೇರಿ 17 : ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಿಸಬೇಕಾಗಿದೆ ತಳಪಾಯ ಗಟ್ಟಿಯಾಗಬೇಕು. ಈ ಹಿನ್ನಲೆಯಲ್ಲಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಸರಿಯಾಗಬೇಕು ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಎಸ್.ಹೊರಟ್ಟಿ ಅವರು ಹೇಳಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಮಂಗಳವಾರ ಎಸ್.ಎಸ್.ಎಲ್.ಸಿ.ಫಲಿತಾಂಶದ ಸುಧಾರಣೆಯ ಕುರಿತು ಜಿಲ್ಲೆಯ ಶಿಕ್ಷಕರೊಂದಿಗೆ ಸಭೆ ಹಾಗೂ ಸಂವಾದ ನಡೆಸಿದ ಅವರು, ಒಂದೊಂದು ತರಗತಿಗೆ ಒಬೊಬ್ಬರು ಶಿಕ್ಷಕರು ಇರಬೇಕು. ಅಂದಾಗ ಮಾತ್ರ ಎಸ್.ಎಸ್.ಎಲ್.ಸಿ. ಉತ್ತಮ ಫಲಿತಾಂಶ ಸಾಧ್ಯ ಎಂದು ಹೇಳಿದರು.
ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ, ಈಗಿನಂತೆ ಇಷ್ಟೇ ಫಲಿತಾಂಶ ಆಗಬೇಕು ಎಂಬ ಯಾವುದೇ ಕಾನೂನು ಇರಲಿಲ್ಲ. ಎಲ್ಲರೂ ಪರೀಕ್ಷೆ ಬರೆಯುತ್ತಿದ್ದರು. ಉತ್ತೀರ್ಣ-ಅನುತ್ತೀರ್ಣ ಆದರೂ ಯಾರೂ ಕೇಳುತ್ತಿರಲಿಲ್ಲ. ಈಗ ಹಾಗಲ್ಲ, ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಶಿಕ್ಷಕರನ್ನು ಪ್ರಶ್ನಿಸುತ್ತಾರೆ. ಶಿಕ್ಷಕನಿಗೆ ಮಾನಸಿಕ ನೆಮ್ಮದಿ ಇದ್ದರೆ ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದು ಹೇಳಿದರು.
ಆಗ ಶಾಲೆಗಳಿಗೆ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು ಯಾವಾಗಲೋ ಒಂದುಬಾರಿ ಶಾಲೆಗಳಿಗೆ ಅನೀರೀಕ್ಷಿತ ಭೇಡಿ ನೀಡುತ್ತಿದ್ದರು ಹಾಗೂ ಶಿಕ್ಷಕ ಮತ್ತು ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡುತ್ತಿದ್ದರು. ಈಗ ಆಗಿಲ್ಲ, ಬಿಸಿಯೂಟ, ಬಾಳೆಹಣ್ಣು, ಮೊಟ್ಟೆ ವಿತರಣೆ ಸೇರಿದಂತೆ ಎಲ್ಲ ಲೆಕ್ಕವನ್ನು ಮಧ್ಯಾಹ್ನ 12 ಗಂಟೆಗೆ ನೀಡಬೇಕು. ಈ ಲೆಕ್ಕಮಾಡುವ ಒತ್ತಡದಲ್ಲಿ ಪಾಠ ಮಾಡಲು ಹೇಗ ಸಾಧ್ಯ?. ಜೊತೆಗೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಪ್ರಾಥಮಿಕ ಶಾಲೆಗಳಲ್ಲಿ ಎರಡು-ಮೂರು ತರಗತಿಗೆ ಒಬ್ಬರು ಶಿಕ್ಷಕರಿದ್ದಾರೆ. ಅವರು ಮಕ್ಕಳಿಗೆ ಏನು ಕಲಿಸಲು ಸಾಧ್ಯ, ಏನು ಕಲಿಯದೆ ಹೈಸ್ಕೂಲಿಗೆ ಬರುತ್ತಾರೆ, ಹಾಗಾಗಿ ಎಸ್.ಎಸ್.ಎಲ್.ಸಿ.ಫಲಿತಾಂಶ ಕಡಿಮೆಯಾಗುತ್ತದೆ. ಈ ಎಲ್ಲ ಸಮಸ್ಯೆಗಳ ಕುರಿತು ನೀವು ಶಿಕ್ಷಕರು ಚರ್ಚಿಸಿ ನನಗೆ ಒಂದು ಪ್ರಾಸ್ತಾವನೆ ಸಲ್ಲಿಸಿ, ನಾನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿಮಗೆ ಸಭೆ ನಡಾವಳಿ ಕಳುಹಿಸುತ್ತೇನೆ ಎಂದು ಹೇಳಿದರು.
ಮೊದಲು ಉತ್ತೀರ್ಣರಾಗಲು 35 ಅಂಕ ಬೇಕಾಗಿತ್ತು. ಈಗ 33ಕ್ಕೆ ಇಳಿಸಲಾಗಿದೆ. 20 ಇಂಟರನಲ್ ಅಂಕ ಕೊಡತಿರಿ, 13 ಅಂಕ ತಗೊಂಡ ವಿದ್ಯಾರ್ಥಿ ಮುಂದೆ ಏನು ಮಾಡಲು ಸಾಧ್ಯ. ಹಾಗಾಗಿ ಶಿಕ್ಷಕರು ಆತ್ಮಸಾಕ್ಷಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಉತ್ತಮ ಶಿಕ್ಷಣ ದೊರೆಯುವಂತಾಗಬೇಕು ಎಂದರು.
ಸರ್ಕಾರಿ ಶಾಲೆಗಳ ಹಾಗೂ ಶಿಕ್ಷಕರ ಸೌಲಭ್ಯ ಅನುದಾನಿತ ಶಾಲೆಗಳಲ್ಲಿ ಸಿಗುವುದಿಲ್ಲ. ಶಿಕ್ಷಕರ ನೇಮಕಾತಿ ಕುರಿತು ಈಗಾಗಲೇ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ. ನಾನು ಸಚಿವನಾಗಿದ್ದಾಗ 48,313 ಸರ್ಕಾರಿ ಶಿಕ್ಷಕರ ಹಾಗೂ ಅನುದಾನಿತ ಶಾಲೆಗಳ 7,200 ಶಿಕ್ಷಕರ ನೇಮಕಕ್ಕೆ ಕ್ರಮವಹಿಸಲಾಗಿತ್ತು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕಚೇರಿ ಅಪರ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಸೇತುಬಂದ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಲಾಗಿದೆ. 29 ಅಂಶಗಳ ಕಾರ್ಯಕ್ರಮದ ಮೂಲಕ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ, ಪಾಲಕರಿಗೆ ಸಭೆ ಮಾಡಲಾಗುತ್ತಿದೆ. ಓದಿನಲ್ಲಿ ಮುಂದೆ ಬರುವ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ವಿಶೇಷ ಆಸಕ್ತಿಯಿಂದ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಪರೀಕ್ಷೆಯಲ್ಲಿ ಇಂಟರನಲ್ 20 ಅಂಕ ಹಾಗೂ ಬ್ಲ್ಯೂಪ್ರಿಂಟ್ 80 ಅಂಕ ಎಂದು ಮಾರ್ಗಸೂಚಿ ಇದೆ. ಹಾಗಾಗಿ ಪ್ರತಿ ವಿದ್ಯಾರ್ಥಿ ಶೇ.40 ಅಂಕ ಪಡೆಯುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗಿದೆ. ಎಲ್.ಎಸ್.ಎಲ್.ಸಿ.ಫಲಿತಾಂಶ ಹೆಚ್ಚಳಕ್ಕೆ ಸರ್ಕಾರ ಹಾಗೂ ಇಲಾಖೆಯ ಆಶಯದಂತೆ ಕಾರ್ಯನಿರ್ವಹಿಸಲಾಗುವುದು ಎಂದರು.
ಹೊರಟ್ಟಿ ಸರ್ ಅವರಿಗೆ ಶಿಕ್ಷಕರ ಬಗ್ಗೆ ಬಹಳ ಪ್ರೇಮವಿದೆ. ಶಿಕ್ಷಣ ಕ್ಷೇತ್ರದ ಯಾವುದೇ ಕೆಲಸ ಇರಲಿ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಅದನ್ನು ಮಾಡುತ್ತಾರೆ, ಅವರು ಶಿಕ್ಷಣ ಇಲಾಖೆ ಶಕ್ತಿ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಎಸ್.ಹೊರಟ್ಟಿ ಅವರನ್ನು ಬಣ್ಣಿಸಿದರು.
ಧಾರವಾಡ ಅಪರ ಆಯುಕ್ತರ ಕಚೇರಿಯ ನಿರ್ದೇಶಕ ಈಶ್ವರ ನಾಯಕ ಮಾತನಾಡಿ, ಕೇರಳ ರಾಜ್ಯದ ಫಲಿತಾಂಶ ಶೇ.99, ಬಿಹಾರ ರಾಜ್ಯದ ಫಲಿತಾಂಶ ಶೇ. 97 ರಷ್ಟು ಆಗುತ್ತದೆ. ಆದರೆ ಕರ್ನಾಟಕ ರಾಜ್ಯದ ಫಲಿತಾಂಶ ಶೇ.50 ರಷ್ಟು ಕಡಿಮೆ ಯಾಕೆ ಆಗುತ್ತದೆ ಎಂಬ ಬಗ್ಗೆ ಪರಾಮರ್ಶೆ ಮಾಡಬೇಕಾಗಿದೆ. ಪೂರ್ವ ಸಿದ್ಧತಾ ಪರೀಕ್ಷೆಗೆ ಹಾಗೂ ಶಾಲೆಗೆ ಗೈರು ಹಾಜರಿ ಗಂಭೀರವಾಗಿ ಪರಿಗಣಿಸಿ, ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಜಾಗೃತೆ ವಹಿಸಬೇಕು ಎಂದು ಸಲಹೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ದಂಡಿನ ಮಾತನಾಡಿ, ಸರ್ಕಾರಿ, ಅನುದಾನಿತ, ಖಾಸಗಿ ಸೇರಿ 471 ಪ್ರೌಢಶಾಲೆಗಳ ವಿದ್ಯಾರ್ಥಿಗಳು, ಪುನರಾವರ್ತಿತ, ಖಾಸಗಿ ಅಭ್ಯರ್ಥಿಗಳು ಸೇರಿದಂತೆ 23,358 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ.69.2 ರಷ್ಟಾಗಿತ್ತು ಹಾಗೂ ರಾಜ್ಯದಲ್ಲಿ 13ನೇ ಸ್ಥಾನದಲ್ಲಿತ್ತು. ಈ ಭಾರಿ ಶೇ.95 ಕ್ಕೂ ಅಧಿಕ ಫಲಿತಾಂಶ ತರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲೇ ವಿಶೇಷ ಚಟುವಟಿಕೆಗಳ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಶ್ರಮವಹಿಸಲಾಗುತ್ತಿದೆ. ಶಾಲೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮಕ್ಕಳೊಂದಿಗೆ ನಿರಂತರ ಸಂದರ್ಶನ ಆಯೋಜನೆ ಮಾಡಲಾಗುತ್ತಿದೆ. ಶಾಲೆಗೆ ಗೈರಾದ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಲಕರು ಹಾಗೂ ವಿದ್ಯಾರ್ಥಿಗಳ ಮನವೊಲಿಸಿ ಶಾಲೆಗೆ ಕರೆತರುವ ಕಾರ್ಯಮಾಡಲಾಗುತ್ತಿದೆ ಎಂದು ಹೇಳಿದರು.
ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾರ್ಗರ್ಶನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 81 ಪರೀಕ್ಷೆ ಕೇಂದ್ರಗಳನ್ನು ಗುರುತಿಸಲಾಗಿದೆ. ಸಿಸಿ ಕ್ಯಾಮರಾ, ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲೆಯ ಶೈಕ್ಷಣಿಕ ಪ್ರಗತಿಸಿ ತಿಳಿಸಿದರು.
ಜಿ.ಪಂ.ಉಪಕಾರ್ಯದರ್ಶಿ ಡಾ.ಪುನಿತ್ ಅವರು ಮಾತನಾಡಿ, ಕಳದ ಭಾರಿ ಜಿಲ್ಲೆ 13ನೇ ಸ್ಥಾನದಲ್ಲಿತ್ತು, ಈ ಬಾರಿ 5ನೇ ಸ್ಥಾನಕ್ಕೆ ಬರಲು ಶೇ.75ರಷ್ಟು ಫಲಿತಾಂಶ ಬರಲು ಶಿಕ್ಷಕರು ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳಿಗೆ ಹಳೆಯ ಪ್ರಶ್ನೆ ಪತ್ರಿಕೆ ಬಿಡಿಸಲು ಹಾಗೂ ಯಾವ ವಿಷಯದ ಮೇಲೆ ಪ್ರಶ್ನೆಗಳನ್ನು ಹೆಚ್ಚು ಕೇಳಿತ್ತಾರೆ ಎಂಬ ಕುರಿತು ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ವಿವಿಧ ಬೇಡಿಕೆಗಳ ಮನವಿ: ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪದಾಧಿಕಾರಿಗಳು, 01-04-2006ರ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ವೇತನ ಬಡ್ತಿ, ಹೊಸ ಪಿಂಚಣಿ, ಖಾಸಗಿ ಶಾಲೆಗಳ ನವೀಕರಣ ಸರಳೀಕರಣ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಮಾನ್ಯ ಸಭಾಪತಿಗಳಿಗೆ ಮನವಿ ಸಲ್ಲಿಸಲಿದರು.
ಅನುದಾನಿತ ಶಾಲೆಗಳ ಶಿಕ್ಷಕರಿಗೆ ವೈದ್ಯಕೀಯ ಸೌಲಭ್ಯ, ಶಿಕ್ಷಕರ ನೇಮಕಾತಿ, ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವಂತೆ ಅನುದಾನಿತ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಸೇರಿದಂತೆ ಶಿಕ್ಷಕರು ಸಭಾಪತಿಗಳಿಗೆ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಧಾರವಾಡ ಅಪರ ಆಯುಕ್ತರ ಕಚೇರಿಯ ಗೀರೀಶ ಪದಕಿ, ಡಯಟ್ ಪ್ರಾಂಶುಪಾಲ ಝಡ್ ಎಂ.ಖಾಜಿ, ನಿರಂಜನಮೂರ್ತಿ, ಜಿಲ್ಲಾ ಅಕ್ಷರದಾಸೋಹ ಅಧಿಕಾರಿ ಎಂ.ಆರ್.ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಚ್.ಪಾಟೀಲ, ಕೋಟಿ, ಎಂ.ಎಫ್.ಬಾರ್ಕಿ, ಎಂ.ಬಿ.ಅಂಬಿಗೇರ, ಎನ್.ಶ್ರೀಧರ, ಆರ್.ವಿ.ಚಿನ್ನಿಕಟ್ಟಿ, ಶ್ಯಾಮಸುಂದರ ಅಡಿಗ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಶಾಂತಗಿರಿ, ಕೆಂಚನಗೌಡ್ರ, ಕಲ್ಮನಿ, ಬೇವಿನಮರದ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 