ಇಸ್ಲಾಮಾಬಾದ್: ಶಾಂತಿ ಪ್ರಕ್ರಿಯೆಯಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ ನಾವು ಎರಡು ಹೆಜ್ಜೆ ಮುಂದಿಡುತ್ತೇವೆ ಎಂದು ಪ್ರಧಾನಿ ಹುದ್ದೆಯ ರೇಸ್ ನಲ್ಲಿ ಮುಂಚೂಣಿಯಲ್ಲಿರುವ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್(ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಅವರು ಗುರುವಾರ ಹೇಳಿದ್ದಾರೆ.
ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಪಿಟಿಐ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಫಲಿತಾಂಶದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, 22 ವರ್ಷ ನಿರಂತರ ಹೋರಾಟದ ಬಳಿಕ ನನ್ನ ಪ್ರಯತ್ನಕ್ಕೆ ಫಲ ಸಿಕ್ಕಿದೆ. ದೇವರಿಗೆ ಹಾಗೂ ನನಗೆ ಮತ ನೀಡಿದ ಜನತೆಗೆ ಧನ್ಯವಾದ ಹೇಳುತ್ತೇನೆ ಎಂದರು.
ಕೆಲವು ದಿನಗಳ ಹಿಂದೆ, ಬಾಲಿವುಡ್ ಚಿತ್ರವೊಂದರಲ್ಲಿ ನನ್ನನ್ನು ಖಳನಾಯಕನಾಗಿ ಬಿಂಬಿಸಲಾಗಿರುವುದು ಭಾರತೀಯ ಮಾಧ್ಯಮಗಳಿಂದ ತಿಳಿದು ಬಂತು. ಆದರೆ ಭಾರತದೊಂದಿಗೆ ನಾನು ಉತ್ತಮ ಸಂಬಂಧ ಹೊಂದಲು ಬಯಸುತ್ತೇನೆ. ನಾವು ಬಡತನವನ್ನು ಕಿತ್ತುಹಾಕಬೇಕು ಎನ್ನುವದಾದರೆ ಭಾರತದೊಂದಿಗೆ ವ್ಯಾಪಾರ ಹೆಚ್ಚಿಸಿಕೊಳ್ಳಬೇಕು ಎಂದು ಪಾಕ್ ಮುಂದಿನ ಪ್ರಧಾನಿ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ನಾವು ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಾಗಿದೆ. ಹಲವು ಉಗ್ರ ದಾಳಿಗಳ ಹೊರತಾಗಿಯೂ ಚುನಾವಣಾ ಪ್ರಕ್ರಿಯೆ ಸಂಪೂರ್ಣ ಯಶಸ್ವಿಯಾಗಿದೆ. ಇದಕ್ಕಾಗಿ ನಾನು ನಮ್ಮ ಭದ್ರತಾ ಪಡೆಗಳಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಬಡತನ ದೊಡ್ಡ ಸವಾಲಾಗಿದ್ದು, ನಾವು ಬಡತನದ ವಿರುದ್ಧ ಹೋರಾಡಬೇಕಾಗಿದೆ. ಇದಕ್ಕೆ ಚೀನಾವೇ ಅತ್ಯುತ್ತಮ ಉದಾಹರಣೆಯಾಗಿದೆ. ಚೀನಾ ಕಳೆದ 30 ವರ್ಷಗಳಲ್ಲಿ 70 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಇಂದು ಸ್ಥಿರತೆ ಇಲ್ಲದೆ ದೇಶ ಎಂದರೆ ಅದು ಪಾಕಿಸ್ತಾನ ಮಾತ್ರ. ಚೀನಾದಿಂದ ಹೆಚ್ಚು ಹೆಚ್ಚು ಬಂಡವಾಳ ಹೂಡಿಕೆಯಾಗಬೇಕಾಗಿದೆ ಮತ್ತು ಪಾಕಿಸ್ತಾನದಲ್ಲಿ ಶಾಂತಿ ನೆಲೆಸಲು ನಮ್ಮ ವಿದೇಶಾಂಗ ನೀತಿಯನ್ನು ಬಲಪಡಿಸಬೇಕಾಗಿದೆ ಎಂದಿದ್ದಾರೆ.
ಪಾಕಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ತರಲು ನಾನು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಅಫ್ಘಾನಿಸ್ತಾನದೊಂದಿಗೂ ಉತ್ತಮ ಸಂಬಂಧ ಹೊಂದುವ ವಿಶ್ವಾಸವಿದೆ ಎಂದರು.