ಇಸ್ರೋದ ಯುವ ವಿಜ್ಞಾನಿ ಕಾರ್ಯಕ್ರಮ: ಆನ್ ಲೈನ್ ನೋಂದಣಿ ಸದ್ಯದಲ್ಲೇ

ಬೆಂಗಳೂರು, ಫೆ,1 :    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಶಾಲಾ ಮಕ್ಕಳಿಗಾಗಿ ವಿಶೇಷ “ಯುವ ವಿಜ್ಞಾನಿ ಕಾರ್ಯಕ್ರಮ" ವನ್ನು  2019ರಿಂದ ಆರಂಭಿಸಿದ್ದು, ಇದೀಗ ಯುವ ವಿಜ್ಞಾನಿ ಕಾರ್ಯಕ್ರಮ 2020ಕ್ಕೆ ಆನ್ ಲೈನ್ ನೋಂದಣಿ ಆರಂಭವಾಗುತ್ತಿದೆ.

ಈ ಕಾರ್ಯಕ್ರಮ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಯುವ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ದೃಷ್ಟಿಯಿಂದ ಹಾಗೂ ಮುಖ್ಯವಾಗಿ ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಅಪ್ಲಿಕೇಶನ್ ಗಳ ಬಗ್ಗೆ ಮೂಲ ಜ್ಞಾನದ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ. ಇಸ್ರೋ “ಕ್ಯಾಚ್ ದೆಮ್ ಯಂಗ್” ಎನ್ನುವ ಘೋಷಣೆಯೊಂದಿಗೆ ಈ ಕಾರ್ಯಕ್ರಮವನ್ನು ಆರಂಭಿಸಿದೆ. 

ಬೇಸಿಗೆ ರಜೆಯಲ್ಲಿ ಅಂದರೆ ಈ ವರ್ಷದ ಮೇನಲ್ಲಿ ಇದು ಎರಡು ವಾರಗಳ ಅವಧಿಯ ವಸತಿ ಸಹಿತ ತರಬೇತಿ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಕ್ಕಾಗಿ ಪ್ರತಿಯೊಂದು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಂದ ರಾಜ್ಯ, ಸಿಬಿಎಸ್ಇ ಮತ್ತು ಐಸಿಎಸ್ಇ ಪಠ್ಯಕ್ರಮದ ಶಾಲೆಗಳಿಂದ ಮೂವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. 

9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಯುವಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ಮಕ್ಕಳನ್ನು ಆನ್ ಲೈನ್ ನೋಂದಣಿ ಮೂಲಕ ಅವರ 8ನೇ ತರಗತಿಯ ಅಂಕಗಳು ಮತ್ತು ಪಠ್ಯೇತರ ಚಟುವಟಿಕೆಗಳನ್ನು ಆಧರಿಸಿ ಆಯ್ಕೆ ಮಾಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಇಸ್ರೋ ವೆಬ್ ಸೈಟ್ www.isro.gov.in ನಲ್ಲಿ 2020ರ ಫೆಬ್ರವರಿ 3ರಿಂದ 2020ರ ಫೆಬ್ರವರಿ 24ರ ವರೆಗೆ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ www.isro.gov.in ಲಾಗ್ ಆನ್ ಆಗಬಹುದು.