ಬೆಂಗಳೂರು, ಅ 13: ಐಟಿ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿರುವ ತಮ್ಮ ಆಪ್ತ ರಮೇಶ್ ಸಾವಿಗೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಒಳ್ಳೆಯ ಹುಡುಗ ಚಿಕ್ಕವಯಸಿನಲ್ಲಿಯೇ ಸಾವಿಗೀಡಾಗಿದ್ದು ಬಹಳ ನೋವುಂಟು ಮಾಡಿದೆ ಎಂದಿದ್ದಾರೆ.
ರಾಮನಗರಕ್ಕೆ ತೆರಳುವ ಮುನ್ನ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು,ರಮೇಶ್ ಅಂತ್ಯಕ್ರಿಯೆಗೆ ಅವರ ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. ರಮೇಶ್ ನನ್ನು ಯಾವುದಕ್ಕೂ ಉಪಯೋಗ ಮಾಡಿಕೊಂಡಿಲ್ಲ. ಪ್ರಾಮಾಣಿಕವಾಗಿಯೇ ಅವನು ತನ್ನ ಕೆಲಸ ನಿರ್ವಹಿಸುತ್ತಿದ್ದ ಎಂದರು.
ನಮ್ಮ ಮನೆಗೆ ಐಟಿ ಅಧಿಕಾರಿಗಳು ಬಂದಾಗ, ಮನೆ ತೋರಿಸಿ ಅದು ತೋರಿಸಿ ಎಂದು ಕೇಳುತ್ತಿದ್ದ ಕಾರಣ ನಾವು ಬ್ಯುಸಿ ಆಗಿಬಿಟ್ಟೆವು. ನಂತರ ಐಟಿ ಅಧಿಕಾರಿಗಳು ರಮೇಶ್ ನನ್ನು ಕರೆದುಕೊಂಡು ಹೋದರು. ಬಳಿಕ ಸಂಜೆ 5 ಗಂಟೆ ಸುಮಾರಿಗೆ ಬಂದ ರಮೇಶ್, ತನ್ನನ್ನು ಮನೆಗೆ ಕರೆದುಕೊಂಡು ಹೋಗಿ, ವಿಚಾರಣೆ ಮಾಡಿದ್ದಾಗಿ ಹೇಳಿದ. ಅದಾದ ಬಳಿಕ ಮನೆಯಲ್ಲಿಯೇ ಎರಡು ದಿನ ಐಟಿ ಅಧಿಕಾರಿಗಳು ಜೊತೆಯಲ್ಲಿಯೇ ಇದ್ದರು. ಪಂಚನಾಮೆ ಆದ ಮೇಲೆ ಅಧಿಕಾರಿಗಳು ಹೊರಟರು. ಬಳಿಕ ನಾನು ನಮ್ಮ ಆಪ್ತ ಸಹಾಕರುಗಳನ್ನು ಕರೆದು ಮಾತಾಡಿದೆ. ಧೈರ್ಯವಾಗಿ ಇರುವಂತೆ ಆತ್ಮ ಸ್ಥರ್ಯ ತುಂಬಿದೆ ಎಂದು ಸ್ಪಷ್ಟಪಡಿಸಿದರು.
ಐಟಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗೆ ಎಲ್ಲಾ ಉತ್ತರ ಕೊಟ್ಟಿದ್ದೇವೆ. ಪರಮೇಶ್ವರ್ ಅವರ ವ್ಯವಹಾರವನ್ನು ರಮೇಶ್ ನೋಡಿಕೊಳ್ಳುತ್ತಿದ್ದರು ಎಂಬ ವಿಚಾರ ನಂಬಲು ಸಾಧ್ಯವಿಲ್ಲ. ಒಬ್ಬ ಆಪ್ತ ಸಹಾಯಕ ಎಲ್ಲಾ ವ್ಯವಹಾರ ನೊಡಿಕೊಳ್ಳುತ್ತಾನೆ ಎಂದರೆ ಅದನ್ನು ಯಾರಾದರೂ ನಂಬಲು ಸಾಧ್ಯವೇ? ಐಟಿ ಅಧಿಕಾರಿಗಳು ರಮೇಶ್ ಗೆ ಏನು ಹೇಳಿದರೋ , ಅವರು ಯಾವ ಉತ್ತರ ನಿರೀಕ್ಷಿಸಿದ್ದರೋ ಗೊತ್ತಿಲ್ಲ. ಐಟಿ ಅಧಿಕಾರಿಗಳು ತಾವು ರಮೇಶ್ ಮೆನಗೆ ಹೋಗಿಲ್ಲ ಎಂದು ಹೇಳಿದ್ದಾರೆ. ನಿಜಕ್ಕೂ ಏನಾಗಿದೆ ಎಂಬುದು ಗೊತ್ತಿಲ್ಲ ಎಂದು ಪರಮೇಶ್ವರ್ ಹೇಳಿದರು.