ಹಾರೂಗೇರಿಯಲ್ಲಿ ಬೃಹತ್ ಹಿಂದೂ ಸಮ್ಮೇಳನ : ಗಮನ ಸೆಳೆದ ಶೋಭಾಯಾತ್ರೆ

ಹಾರೂಗೇರಿಯಲ್ಲಿ ಬೃಹತ್ ಹಿಂದೂ ಸಮ್ಮೇಳನ : ಗಮನ ಸೆಳೆದ ಶೋಭಾಯಾತ್ರೆ Huge Hindu gathering in Harugeri: A procession that attracted attention

    ಹಾರೂಗೇರಿ, 18 : ಭಾರತ ಜಗತ್ತಿಗೆ ಶ್ರೇಷ್ಠ ಕೊಡುಗೆ ಕೊಟ್ಟು ಜಗತ್ತಿಗೆ ಮಾರ್ಗದರ್ಶನ ಮಾಡುತ್ತಿದೆ. ಇಡೀ ಪ್ರಪಂಚವೇ ಭಾರತದತ್ತ ಕೃತಜ್ಞತಾ ಭಾವದಿಂದ ನೋಡುತ್ತವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಉತ್ತರ ಪ್ರಾಂತ ಸಂಚಾಲಕ ನರೇಂದ್ರ ಹೇಳಿದರು.  ಪಟ್ಟಣದ ಶ್ರೀ ಚನ್ನವೃಷಭೇಂದ್ರ ಲೀಲಾಮಠದ ಆವರಣದಲ್ಲಿ ಶನಿವಾರ ಸಂಜೆ ನಡೆದ ಹಿಂದೂ ಸಮ್ಮೇಳನ ಹಾಗೂ ಶೋಭಾಯಾತ್ರೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. 

    ಭಾರತದ ಕ್ಷಾತ್ರ ಪರಂಪರೆಯನ್ನು ವಿಶ್ವ ಎಂದೂ ಮರೆಯಲು ಸಾಧ್ಯವಿಲ್ಲ. ವರ್ತಮಾನದಿಂದ ಭವಿಷ್ಯತ್ತಿನವರೆಗೂ ಭಾರತ ಜಗತ್ತಿಗೆ ಗುರುವಾಗಿ ಬೆಳಕು ತೋರಲಿದ್ದು, ದೇಶಕ್ಕಾಗಿ ನಾವು ಎನ್ನುವ ಭಾವನೆಯೊಂದಿಗೆ ಧರ್ಮ, ಸಂಸ್ಕೃತಿ, ಸಾಮಾಜಿಕ ಸಾಮಾಜಿಕ ಸಾಮರಸ್ಯ ಕಾಯ್ದುಕೊಂಡು ಹೊರಟಿರುವ ಹಿಂದೂ ಸಮಾಜ ಸಂಘಟಿತವಾಗಿ ಮುನ್ನುಗ್ಗುತ್ತಿದೆ ಎಂದರು. ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಉಪಾಧ್ಯಕ್ಷೆ ಡಾ.ನಂದಿತಾ ಒಡೆಯರ ಮಾತನಾಡಿ ಸಂಘಟಿತ ಹಿಂದೂ ಸಮಾಜದ ಶಕ್ತಿಯಿಂದ ಮಾತ್ರ ರಾಷ್ಟ್ರದ ಉನ್ನತಿ ಸಾಧ್ಯವಿದೆ. ಪ್ರತಿಯೊಬ್ಬರೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕೆಂದು ಹೇಳಿದರು. 

ಭವ್ಯ ಶೋಭಾಯಾತ್ರೆಗೆ ಚಾಲನೆ 

     ಸರ್ವೇ ಜನಃ ಸುಖಿನೋ ಭವಂತು ಎಂಬ ಧ್ಯೇಯವಾಕ್ಯದಡಿ ಶ್ರೀ ಚನ್ನವೃಷಭೇಂದ್ರ ಲೀಲಾಮಠದಿಂದ ಮಹಾಪುರುಷರು, ದಾರ್ಶನಿಕರ ಭಾವಚಿತ್ರಗಳು ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭವ್ಯ ಶೋಭಾಯಾತ್ರೆ ಜರುಗಿತು. ಮುಗಳಖೋಡ-ಜಿಡಗಾ ಮಠದ ಪೂಜ್ಯಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಶೋಭಾಯಾತ್ರೆಗೆ ಚಾಲನೆ ನೀಡಿದರು. ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಸ್ವರೂಪಾನಂದ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ, ರಾಮಣ್ಣಾ ಮಹಾರಾಜರು ಇದ್ದರು. 

    ಮಾಜಿ ಶಾಸಕ ಪಿ.ರಾಜೀವ್, ಬಸಗೌಡ ಆಸಂಗಿ, ವೆಂಕಟೇಶ ದೇಶಪಾಂಡೆ, ಅಶೋಕ ಅಸ್ಕಿ, ಮಲ್ಲಿಕಾರ್ಜುನ ಖಾನಗೌಡರ, ಬಿ.ಬಿ.ಕರ್ಣವಾಡಿ, ಅಪ್ಪಾಸಾಬ ಕುಲಕರ್ಣಿ, ಶ್ರೀಶೈಲಗೌಡ ಉಮರಾಣಿ, ಬಿ.ಎ.ಜಂಬಗಿ, ಬಾಬು ಪರಮಗೌಡರ, ಡಿ.ಸಿ.ಸದಲಗಿ, ಶ್ರೀಧರ ಮೂಡಲಗಿ, ಲತಾ ಹುದ್ದಾರ, ಭರತೇಶ ಬನವಣೆ, ರಾಜು ಐತವಾಡೆ, ಮಹೇಶ ಕರಮಡಿ, ರಾಜಶೇಖರ ಖಣದಾಳೆ, ರಮೇಶ ತೇಲಿ ಮೊದಲಾದವರು ಉಪಸ್ಥಿತರಿದ್ದರು.  ಹಣಮಂತ ಯಲಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಆಯ್‌.ಬಾಡಗಿ ಕಾರ್ಯಕ್ರಮ ನಿರೂಪಿಸಿದರು.