ಚಿತ್ರದುರ್ಗ, ಫೆ 28 : ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟ ಮಾಡುತ್ತಿದ್ದ ಸಮಯದಲ್ಲಿ ಯತ್ನಾಳ್ ಹುಟ್ಟಿದ್ದರೋ ಇಲ್ಲವೋ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ದೊರೆಸ್ವಾಮಿ ಹೋರಾಟದ ಸಮಯದಲ್ಲಿ ಕುಮಾರಸ್ವಾಮಿ ಎಲ್ಲಿ ಹುಟ್ಟಿದ್ದರು?. ಯಾರು ಕೂಳಿಗೆ ಗತಿ ಇಲ್ಲವೋ ಅವರು ಸೇನೆಗೆ ಸೇರುತ್ತಾರೆ ಎಂದು ಕುಮಾರ ಸ್ವಾಮಿ ಸೈನಿಕರಿಗೆ ಅಪಮಾನ ಮಾಡಿದ್ದರು. ಇಂತಹವರು ನನಗೆ ರಾಷ್ಟ್ರಪ್ರೇಮದ ಬಗ್ಗೆ ಪಾಠ ಮಾಡುತ್ತಾರೆ. ಇವರಿಗೆ ನಾಚಿಕೆ ಆಗಬೇಕು ಎಂದರು.
ನೀವು ಯಾಕೆ ರಾಜಕಾರಣಕ್ಕೆ ಬಂದಿದ್ದು ಯಾವ ಉದ್ದೇಶದಿಂದ, ರಾಜಕಾರಣಕ್ಕೆ ಬರಲು ನಿಮ್ಮ ಮೂಲ ಯಾವುದು?. ನಿಮ್ಮ ತಂದೆ ದೇವೇಗೌಡರು ವರ್ಕ್ ಇನ್ಸ್ ಪೆಕ್ಟರ್ ಆಗಿದ್ವದರು. ಹೀಗಿರುವಾಗ ನಿಮಗೆ ಸಾವಿರಾರು ಕೋಟಿ ಹೇಗೆ ಬಂತು?. ನನ್ನ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಎಲ್ಲಿದೆ?. ಎಂದು ಪ್ರಶ್ನಿಸಿದರು.
ಇವರ ತಂದೆ ದೇವೇಗೌಡರು ಏನಾದರೂ ಸ್ವಾತಂತ್ರ್ಯ ಸೈನಿಕರೇ?. ಗೌಡರ ಕುಟುಂಬದಿಂದ ಎಲ್ಲಾ ರಾಜಕಾರಣಿಗಳದ್ದು ಅಡ್ಜಸ್ಟ್ ಮೆಂಟ್ ಇರಬಹುದು. ಆದರೆ ಯತ್ನಾಳ್ ಜತೆ ಯಾರಿಗೂ ಅಡ್ಜಸ್ಟ್ ಆಗಲು ಸಾಧ್ಯವಿಲ್ಲ ಎಂದರು.
ಸಚಿವ ನಾರಾಯಣಗೌಡ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿರುವ ಕುರಿತು ಪ್ರಶ್ನಿಸಿದಾಗ, ಅವರೇನು ಪಾಕಿಸ್ತಾನಕ್ಕೆ ಜೈ ಎಂದು ಕೂಗಿಲ್ಲ. ನಮ್ಮ ದೇಶದ ಒಂದು ಭಾಗಕ್ಕೆ ಜೈ ಅಂದಿದ್ದಾರೆ ಅದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡರು. ಹುಬ್ಬಳ್ಳಿ, ಬೆಂಗಳೂರಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕುವಾಗ ಕನ್ನಡಪರ ಹೋರಾಟಗಾರರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.
ಆನೆ ನಡೆಯುವಾಗ ನಾಯಿಗಳು ಬೊಗಳಿದರೆ ಏನೂ ಆಗುವುದಿಲ್ಲ ಎಂಬ ಸಾಣೇಹಳ್ಳಿ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಅದು ಆನೆನೋ, ಹಂದಿಯೋ ಯಾರಿಗೆ ಗೊತ್ತು ಎಂದು ತಿರುಗೇಟು ನೀಡಿದರು.