ರಸ್ತೆ ವಿಸ್ತರಣೆಗಾಗಿ ನೆಲಸಮ ಮಾಡುವ ಬದಲು ಮನೆ ಸ್ಥಳಾಂತರ

ರಸ್ತೆ ವಿಸ್ತರಣೆಗಾಗಿ ನೆಲಸಮ ಮಾಡುವ ಬದಲು ಮನೆ ಸ್ಥಳಾಂತರ House shifted instead of demolished for road widening in Nashik

ನಾಸಿಕ್, ಸೆ. 17: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಯೇವಲಾ ತಾಲ್ಲೂಕಿನಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗೆ ಅಡ್ಡಿಯಾಗಿದ್ದ ನೂತನವಾಗಿ ನಿರ್ಮಿಸಲಾದ ಮನೆಯೊಂದನ್ನು ನೆಲಸಮ ಮಾಡುವ ಬದಲು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಯೇವಲಾ ಮೂಲದ ಉದ್ಯಮಿ ಸಾಮ್ರಾಟ್ ವರ್ಮಾ ಅವರ ಕಾರ್ಖಾನೆ ಸಮೀಪದಲ್ಲಿರುವ ಈ ಮನೆ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿತ್ತು. ಹೊಸದಾಗಿ ನಿರ್ಮಿಸಿದ್ದ ಮನೆಯನ್ನು ನೆಲಸಮಗೊಳಿಸಿ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಅನುಭವಿಸುವ ಬದಲು, ಮನೆಯನ್ನೇ ಸ್ಥಳಾಂತರಿಸಿ ಅದರ ಆಸ್ತಿ ಮೌಲ್ಯ ಹಾಗೂ ಭಾವನಾತ್ಮಕ ಮಹತ್ವವನ್ನು ಉಳಿಸಿಕೊಳ್ಳಲು ವರ್ಮಾ ನಿರ್ಧರಿಸಿದ್ದಾರೆ.

ಮನೆ ಸ್ಥಳಾಂತರ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಹರಿಯಾಣದ ಕುರುಕ್ಷೇತ್ರದ ತಜ್ಞರನ್ನು ಈ ಕಾರ್ಯಕ್ಕಾಗಿ ಕರೆಸಲಾಗಿದೆ. ಸುಮಾರು 250 ಹೈಡ್ರಾಲಿಕ್ ಜ್ಯಾಕ್‌ಗಳ ಸಹಾಯದಿಂದ ಮನೆಯನ್ನು ಅದರ ಅಡಿಪಾಯದಿಂದ ಮೇಲಕ್ಕೆತ್ತಿ, 10 ಮಂದಿ ಕಾರ್ಮಿಕರ ತಂಡವು ಹೊಸ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ.

ಮನೆ ಸ್ಥಳಾಂತರದ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು ಒಂದು ತಿಂಗಳು ಬೇಕಾಗುವ ನಿರೀಕ್ಷೆಯಿದೆ.

ನಾಸಿಕ್ ಜಿಲ್ಲೆಯಲ್ಲಿ ಸಂಪೂರ್ಣ ಮನೆಯೊಂದನ್ನು ಸ್ಥಳಾಂತರಿಸುತ್ತಿರುವ ಮೊದಲ ಪ್ರಯೋಗ ಇದಾಗಿದೆ ಎಂದು ಹೇಳಲಾಗುತ್ತಿದೆ. ಮನೆಯನ್ನು ನೆಲಸಮ ಮಾಡುವ ಬದಲು ಆಧುನಿಕ ತಂತ್ರಜ್ಞಾನ ಬಳಸಿ ಉಳಿಸುವ ಈ ಪ್ರಯತ್ನ ಸ್ಥಳೀಯ ನಿವಾಸಿಗಳ ಗಮನ ಸೆಳೆದಿದ್ದು, ಮೆಚ್ಚುಗೆಗೂ ಪಾತ್ರವಾಗಿದೆ.