ಹಾರೂಗೇರಿ 06: ಹಾರೂಗೇರಿ ಬೆಳಗಾವಿ ಜಿಲ್ಲೆಯ ಶಿಕ್ಷಣ ಕಾಶಿ. ಇಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮತ್ತು ಜ್ಞಾನಾಭಿವೃದ್ಧಿಗಾಗಿ ಶೀಘ್ರ ಹೈಟೆಕ್ ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಂಗಳವಾರ ನಡೆದ ಪ್ರಗತಿ ಪರೀಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಪಟ್ಟಣದ ರಾಯಬಾಗ ರಸ್ತೆಯ ವಾರ್ಡ ನಂ.10ರಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಾಣಕ್ಕೆ ಸ್ಥಳವನ್ನು ಗುರುತಿಸಲಾಗಿದ್ದು, ತಕ್ಷಣ 2 ಅಂತಸ್ತಿನ ಬ್ಲೂಪ್ರಿಂಟ್ ತಯಾರಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಶೀಘ್ರದಲ್ಲೇ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.
ಬೀದಿಬದಿ ವ್ಯಾಪಾರಸ್ತರಿಗೆ ಪುರಸಭೆಯಿಂದ ಸಿಗುವ ಸೌಲಭ್ಯಗಳನ್ನು ಮಂಜೂರು ಮಾಡಬೇಕು. ಪಟ್ಟಣದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಮೊದಲಾದ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಬಗೆ ಹರಿಸುವುದಾಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಈ ವೇಳೆ ಹಾರೂಗೇರಿ ಪುರಸಭೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಪುರಸಭೆ ಸದಸ್ಯರು ಮನವಿ ಮಾಡಿದರು.
ರಾಯಬಾಗ ತಹಸೀಲ್ದಾರ ಸುರೇಶ ಮುಂಜೆ, ಮಾಜಿ ಶಾಸಕ ಎಸ್.ಬಿ.ಘಾಟಗೆ, ಪುರಸಭೆ ಅಧ್ಯಕ್ಷ ವಸಂತ ಲಾಳಿ, ಉಪಾಧ್ಯಕ್ಷ ಬಸವರಾಜ ಅರಕೇರಿ, ಮುಖ್ಯಾಧಿಕಾರಿ ಅಭಿಷೇಕ ಪಾಂಡೆ, ಕಾಂಗ್ರೆಸ್ ಕಿಸಾನ ರಾಜ್ಯ ಘಟಕ ಉಪಾಧ್ಯಕ್ಷ ದಸ್ತಗೀರ ಕಾಗವಾಡೆ, ರೇವಣ್ಣ ಸರವ, ಗೀರೀಶ ದರೂರ, ಪ್ರವೀಣ ಗಸ್ತಿ, ಅಪ್ಪಾಸಾಬ ಸರಿಕರ, ನ್ಯಾಯವಾದಿ ಎಂ.ಎಂ.ಚಿಂಚಲಿಕರ, ಮಹೇಶ ಐಹೊಳೆ, ರವಿ ಗಸ್ತಿ, ಯಲ್ಲಪ್ಪ ಶಿಂಗೆ, ಬಸವರಾಜ ಚೌಗಲಾ, ಸಂತೋಷ ಸಿಂಗಾಡಿ, ವಿಶಾಲ ಅರಕೇರಿ, ಬಾಬುರಾವ ನಡೋಣಿ ಹಾಗೂ ಮೊದಲಾದ ಅಧಿಕಾರಿಗಳು ಮತ್ತು ಪುರಸಭೆ ಸದಸ್ಯರು ಉಪಸ್ಥಿತರಿದ್ದರು.