ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಪಾಲಿಕೆ ವಿರುದ್ಧ ಕ್ರಮಕ್ಕೆ ಒತ್ತಾಯ

ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಪಾಲಿಕೆ ವಿರುದ್ಧ ಕ್ರಮಕ್ಕೆ ಒತ್ತಾಯ  Hesitation over pro-Kannada resolution: Demand for action against the corporation

ಲೋಕದರ್ಶನ ವರದಿ 

ಬೆಳಗಾವಿ 08: ಕನ್ನಡಪರವಾದ ನಿರ್ಣಯ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ  ಎಂದು ಬೆಳಗಾವಿ ಕನ್ನಡ ಸಂಘಟನೆಗಳ ವತಿಯಿಂದ ಸಚಿವ ಸತೀಶ ಜಾರಕಿಹೊಳಿ ಅವರಿಗೆ  ಸೋಮವಾರ ಮನವಿ ಸಲ್ಲಿಸಲಾಯಿತು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಗಡಿವಿವಾದಕ್ಕೆ ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ನಿರ್ಣಯ ಅಂಗೀಕರಿಸಬೇಕೆಂದು ಆಗ್ರಹಿಸಿ ಬೆಳಗಾವಿಯ 20ಕ್ಕೂ ಹೆಚ್ಚು ಕನ್ನಡ ಸಂಘಟನೆಗಳು ಕಳೆದ ಮಾರ್ಚ 26ರಿಂದ ಹೋರಾಟ ನಡೆಸಲಾಗುತ್ತಿದೆ. ಆದರೂ ಪಾಲಿಕೆಯ ಮಹಾಪೌರ ಅಥವಾ ಉಪಮಹಾಪೌರರು ಯಾವದೇ ರೀತಿಯ ಸ್ಪಂದನೆ ಮಾಡುತ್ತಿಲ್ಲ.  

ಕಳೆದ 2005ರ ಅಕ್ಟೋಬರ್ 27ರಂದು ಬೆಳಗಾವಿ ಪಾಲಿಕೆಯಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ನಿರ್ಣಯವನ್ನು ಕೈಗೊಳ್ಳಲಾಗಿದೆ. ಆದರೆ ಮಹಾರಾಷ್ಟ್ರ ಸರಕಾರವು ಈ ನಿರ್ಣಯವನ್ನು ಸುಪ್ರೀಮ್ ಕೋರ್ಟಿನ ಮುಂದಿರುವ ಗಡಿ ವಿವಾದ ಪ್ರಕರಣದಲ್ಲಿ ಪೂರಕ ದಾಖಲೆಯನ್ನಾಗಿ ಬಳಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸದ್ಯ ಕನ್ನಡಿಗರೇ ಬಹುಮತ ಹೊಂದಿರುವ ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯನ್ನು ಅಂಗೀಕರಿಸಬೇಕೆಂದು ಕಳೆದ ಎರಡು ತಿಂಗಳಿಂದ ಹೋರಾಟ ನಡೆಸಿದರೂ ಪಾಲಿಕೆಯಿಂದ ಯಾವುದೇ ಸ್ಪಂದನೇ ದೊರೆತ್ತಿಲ್ಲ ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದರು.  

2004ರಿಂದ ಸುಪ್ರೀಂ ಕೋರ್ಟಿನಲ್ಲಿ ಸ್ವೀಕಾರವಾಗದೆ ಹೊಸ್ತಿಲಲ್ಲಿರುವ ಗಡಿ ವಿವಾದ ಪ್ರಕರಣದಲ್ಲಿ ಮಹಾರಾಷ್ಟ್ರ ಸರಕಾರವು ಬೆಳಗಾವಿ ಪಾಲಿಕೆಯ ಗೊತ್ತುವಳಿಯನ್ನು ಪೂರಕ ದಾಖಲೆಯನ್ನಾಗಿ ಬಳಸುತ್ತಿದೆ. ಒಂದು ವರ್ಷದ ನಂತರ 2005ರ ಅಕ್ಟೋಬರ್ 27ರಂದು ಎಮ್‌ಇಎಸ್ ಬಹುಮತದ ಪಾಲಿಕೆಯಲ್ಲಿ ಮಹಾರಾಷ್ಟ್ರ ಪರವಾದ ಗೊತ್ತುವಳಿಯನ್ನು ಪಾಸು ಮಾಡಲಾಯಿತು.     

ಈ ಹಿನ್ನೆಲೆಯಲ್ಲಿ ಈಗ ಕರ್ನಾಟಕ ಪರವಾದ ಗೊತ್ತುವಳಿ ಸ್ವೀಕರಿಸಬೇಕೆಂದು ಕನ್ನಡ ಸಂಘಟನೆಗಳು ಹೋರಾಟ ನಡೆಸಿವೆ. ಎರಡು ತಿಂಗಳಿಂದ ಹೋರಾಟ ನಡೆಸಿದರು ಸಹ ಪಾಲಿಕೆಯಲ್ಲಿ 35 ಸದಸ್ಯರ ಬಹುಮತ ಹೊಂದಿರುವ ಬಿಜೆಪಿ ನಾಯಕರು ಗೊತ್ತುವಳಿ ಸ್ವೀಕರಿಸಿಲ್ಲ. ಹೀಗಾಗಿ ಪಾಲಿಕೆಯ ಎದುರು ಇಡೀ ದಿನ ಧರಣಿ ಸತ್ಯಾಗ್ರಹವನ್ನು ನಡೆಸಲಾಯಿತು. ಗೊತ್ತುವಳಿ ಸ್ವೀಕರಿಸಲು ವಿಫಲವಾದ ಹಿನ್ನೆಲೆಯಲ್ಲಿ 20ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಬೆಳಗಾವಿಯಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಾಯಿತ್ತು, ಈ ವೇಳೆ 500ಕ್ಕೂ ಅಧಿಕ ಕಾರ್ಯಕರ್ತರು ಬಂಧನ ಮಾಡಲಾಗಿತ್ತು ಎಂದು ಮನವಿ ಮೂಲಕ ಸಚಿವರಿಗೆ ತಿಳಿಸಿದರು. 

ಕರ್ನಾಟಕ ವಿಧಾನ ಮಂಡಲವು ಹತ್ತಾರು ಬಾರಿ ಗೊತ್ತವಳಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳಿಸಿದೆ. ಆದರೆ ಪಾಲಿಕೆಯ ಮಹಾಪೌರರು ಹಾಗೂ ಉಪಮಹಾಪೌರರು ಸುಪ್ರೀಮ್ ಕೋರ್ಟ ಮುಂದಿರುವ ಗಡಿವಿವಾದದ ಪ್ರಕರಣದ ನೆಪ ಹೇಳುತಿದ್ದಾರೆ.  ಸುಪ್ರೀಮ್ ಕೋರ್ಟಿನ ಹಿರಿಯ ನ್ಯಾಯವಾದಿ ಮೋಹನ ಕಾತರಕಿ ಅವರು ತಮ್ಮ ಕಾನೂನಾತ್ಮಕ ಅಭಿಪ್ರಾಯ ನೀಡಿದ್ದು, ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಯಾವುದೇ ಕಾನೂನು ತೊಡಕಿಲ್ಲವೆಂದು ಅಖಿತವಾಗಿ ತಿಳಿಸಿದ್ದಾರೆ. ಆದರೂ ಸಹಿತ ಮಹಾಪೌರರು ಹಾಗೂ ಉಪಮಹಾಪೌರರು ತಮ್ಮ ಮೊಂಡುವಾದವನ್ನು ಮುಂದುವರೆಸಿದ್ದಾರೆ.  

ಕನ್ನಡ ಪರ ಸಂಘಟನೆಗಳು ಹೋರಾಟದ ಭಾಗವಾಗಿ ಜೂನ್ 1ರಿಂದ ಪ್ರತಿದಿನ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸುತ್ತಿವೆ.  ಆದರೂ ಯಾವುದೇ ಸ್ಪಂದನೆ ದೊರತ್ತಿಲ್ಲ, ಈ ಮೂಲಕ ರಾಜ್ಯ ಸರಕಾರದ ಗಮನ ಸೆಳೆಯುವ ಕಾರ‌್ಯವಾಗಬೇಕಿದೆ ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಶೋಕ ಚಂದರಗಿ, ಮಹಾದೇವ ತಳವಾರ, ಬಲರಾಮ ಮಾಸೇನಟಿ, ಶ್ರೀನಿವಾಸ ತಾಳೂಕರ್, ಮಲ್ಲಪ್ಪ ಗುಡಗೇನಟ್ಟಿ, ರವಿ ಜಗಮೈನ್ನವರ, ಸರ್ವಮಂಗಳಾ ಅರಳಿಕಟ್ಟಿ,  ಸಿದ್ದಲಿಂಗಪ್ಪ ಸುನಕುಪ್ಪಿ ಹಾಗೂ ಇತರರು ಉಪಸ್ಥಿತರಿದ್ದರು.