ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ

ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ Hesitation over pro-Kannada decision: Mayor's move now raises doubts

ಪಾರೇಶ ಭೋಸಲೆ 

ಬೆಳಗಾವಿ : “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಹಾಗೂ ಗಡಿ ವಿಷಯದಲ್ಲಿ “ಮಹಾಜನ್ ಆಯೋಗದ ವರದಿ”ಯೇ ಅಂತಿಮ ಎಂಬ ನಿರ್ಣಯ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರ ಮತ್ತು ಉಪಮಹಾಪೌರರ ನಡೆ ಈಗ ಹಲವು ಸಂಶಯಕ್ಕೆ ಯಡೆ ಮಾಡಿದ್ದು, ಮಹಾಪೌರ ಮತ್ತು ಉಪಮಹಾಪೌರರ ಮೇಲೆ ಕನ್ನಡಪರ ನಿರ್ಣಯ ಮಾಡದಂತೆ ರಾಜಕೀಯ ಒತ್ತಡ ಇದೆ ಎನ್ನುವ ಮಾತು ಈಗ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗುತ್ತಿದೆ. ಪಾಲಿಕೆಯಲ್ಲಿ ಕನ್ನಡಪರ ನಿರ್ಣಯ ಕೈಗೊಂಡರೆ ಮಹಾರಾಷ್ಟದ ಬಿಜೆಪಿ ಸರಕಾರಕ್ಕೆ ಸಮಸ್ಯೆ ಎದುರಾಗುವ ನೀರಿಕ್ಷೆ ಇರುವ ನಿಟ್ಟಿನಲ್ಲಿ ಈ ಕನ್ನಡಪರ ನಿರ್ಣಯಕ್ಕೆ ಬಿಜೆಪಿ ಎಳ್ಳುನೀರು ಹಾಕುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಆದರೆ ಇದರ ನಡುವೆ ರಾಜ್ಯಭಾರ ಮಾಡುತ್ತಿರುವ ಕಾಂಗ್ರೆಸ್ ಕೂಡಾ ಕಣ್ಣಿದ್ದು ಕುರುಡನಂತೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಈ ಇಬ್ಬರ ತಂತ್ರ ಪ್ರತಿತಂತ್ರ ನಡುವೆ ಕನ್ನಡದ ಕಗ್ಗೊಲೆ ಆಗುತ್ತಿದೆ. 

      ಹೌದು ಓದುಗರೇ... ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸದ್ಯ ಬಿಜೆಪಿ ಆಡಳಿತ ಪಕ್ಷದ ಹಿಡಿತ ಇದ್ದು, ಪಾಲಿಕೆಗೆ ಆಯ್ಕೆಯಾದ ಬಹುತೇಕ ಸದಸ್ಯರು ಎಮ್‌ಇಎಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿ ಚುನಾಯಿತರಾದವರು ಇದ್ದಾರೆ. ಹಾಗೂ ಅವರಲ್ಲಿ ಕೆಲವರು ಮರಾಠಿಮಯ ಸದಸ್ಯರು ಆಗಿದ್ದಾರೆ. ಅವರು ಕೂಡಾ ಈ ಕನ್ನಡಪರ ನಿರ್ಣಯ ಕೈಗೊಳ್ಳಲು ಹಿಂದೇಟು ಹಾಕುತ್ತಿರುವದು ಒಂದು ಭಾಗವಾದರೆ, ಮಹಾರಾಷ್ಟ್ರದಲ್ಲಿ ಸದ್ಯ ಬಿಜೆಪಿ ಸರಕಾರ ಇದ್ದು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಪರ ನಿರ್ಣಯ ಕೈಗೊಂಡರೆ ಮಹಾರಾಷ್ಟ್ರದ ಬಿಜೆಪಿ ಸರಕಾರ ಮೇಲೆ ಪರಿಣಾಮ ಬೀರಬಹದು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ಈ ನಿರ್ಣಯಕ್ಕೆ ತಣ್ಣೀರು ಎರಚುತ್ತಿದ್ದಾರೆ ಎನ್ನುವದು ಈಗ ಬೆಳಗಾವಿ ಯಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. 

    ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹಾಪೌರರಾಗಿ ಪ್ರೀತಿ ಕಾಮಕರ್ ಹಾಗೂ ಹನುಮಂತ ಕೊಂಗಾಲಿ ಉಪಮಹಾಪೌರರಾಗಿ ಕಾರ್ಯ ಮಾಡುತ್ತಿದ್ದಾರೆ. ಆದರೆ ಇವರಿಬ್ಬರು ಕನ್ನಡಿಗರು ಇದ್ದರೂ ಪಾಲಿಕೆಯಲ್ಲಿ ಕನ್ನಡಪರವಾದ ನಿರ್ಣಯ ಕೈಗೊಳ್ಳಲು ಇವರಿಬ್ಬರು ಮೀನಾಮೇಷ ಮಾಡುತ್ತಿದ್ದು, ಇದರ ಹಿಂದೆ ಇರುವ ಉದ್ದೇಶವಾದರು ಎನಿದೆ ಎಂಬುವದು ಯಾರಿಗೂ ತಿಳಿಯದಂತಾಗಿದೆ. ಕಳೆದ ಒಂದು ತಿಂಗಳ ಹಿಂದಿನಿಂದ ಬೆಳಗಾವಿ ಕೆಲವು ಕನ್ನಡ ಹೋರಾಟಗಾರರು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಗಡಿ ವಿಷಯದಲ್ಲಿ ಮಹಾಜನ್ ಆಯೋಗದ ವರದಿ ಅಂತಿಮ ಎಂಬ ಠರಾವು ಪಾಸು ಮಾಡುವಂತೆ ಪಾಲಿಕೆ ಮಹಾಪೌರ ಹಾಗೂ ಉಪಮಹಾಪೌರರಿಗೆ ಮನವಿಗಳನ್ನು ನೀಡುವ ಮೂಲಕ ಒತ್ತಾಯಿಸಿದ್ದರು.

    ಬೆಳಗಾವಿ ಪಾಲಿಕೆ ಕನ್ನಡಿಗರ ಹಿಡಿತದಲ್ಲಿ ಇದ್ದರೂ ಕನ್ನಡದ ನಿರ್ಣಯ ಕೈಗೊಳ್ಳಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಯಕ್ಷ ಪ್ರಶ್ನೆ ಕನ್ನಡಿಗರನ್ನು ಕಾಡತೊಗಿತ್ತು. ಈ ಬಗ್ಗೆ ಮುಂದಿನ ಪಾಲಿಕೆ ಪರಿಷತ್ತನ ಸಭೆಯಲ್ಲಿ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳುವ ಭರವಸೆಗಳನ್ನು ನೀಡುತ್ತ ಕಾಲಹರಣ ಮಾಡುತ್ತ ಸಾಗಿರುವದು ನೋಡಿದರೆ ಮಹಾಪೌರ ಮತ್ತು ಉಪಮಹಾಪೌರರ ಮೇಲೆ ರಾಜಕೀಯ ಒತ್ತಡ ಹೆಚ್ಚಾಗುತ್ತಿರುವ ಸನ್ನಿವೇಶಗಳು ಗೋಚರಿಸುತ್ತಿವೆ ಎನ್ನಲಾಗುತ್ತಿದೆ.

26ರಂದು ವಾಟಾಳ ನೇತೃತ್ವದಲ್ಲಿ ಪಾಲಿಕೆಗೆ ಕನ್ನಡಿಗರಿಂದ ಮುತ್ತಿಗೆ 

     ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ, “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” “ಗಡಿ ವಿವಾದ ಪರಿಹಾರಕ್ಕೆ ಮಹಾಜನ ಆಯೋಗದ ವರದಿಯೇ ಅಂತಿಮ" ಎಂಬ ಗೊತ್ತುವಳಿಯನ್ನು ಅಂಗೀಕರಿಸಬೇಕೆಂದು ಬೆಳಗಾವಿಯ ಕನ್ನಡ ಪರ ಸಂಘಟನೆಗಳು ಕಳೆದ ಮಾರ್ಚ 26ರಿಂದ ನಡೆಸಿರುವ ಹೋರಾಟ ಈಗ ಮತ್ತಷ್ಟು ತೀವ್ರಗೊಂಡಿದ್ದು, ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲು ಬರುವ ಮಂಗಳವಾರ ದಿ. 26ರಂದು ನಾಡಿನ ಹಿರಿಯ ಕನ್ನಡ ಹೋರಾಟಗಾರರಾದ ವಾಟಾಳ ನಾಗರಾಜ, ಸಾ.ರಾ. ಗೋವಿಂದು, ಕೆ.ಆರ್, ಕುಮಾರ ಹಾಗೂ ಮಂಜುನಾಥ ದೇವ ಅವರು ಬೆಳಗಾವಿಗೆ ಆಗಮಿಸಲಿದ್ದಾರೆ. 

    ಮುಂಜಾನೆ 10 ಗಂಟೆಗೆ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಪುನ ಸ್ಥಾಪನೆಗೊಂಡ ಹಲ್ಮಡಿ ಶಾಸನದ ಪೂಜಾ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಅವರುಗಳ ನೇತೃತ್ವದಲ್ಲಿ ಬೆಳಗಾವಿಯ 20 ಕನ್ನಡ ಪರ ಸಂಘಟನೆಗಳ ನೂರಾರು ಕನ್ನಡ ಪ್ರಮುಖರು, ಕಾರ್ಯಕರ್ತರು ಬೆಳಗಾವಿಗೆ ಪಾಲಿಕೆಗೆ ಮುತ್ತಿಗೆ ಹಾಕಲಿದ್ದಾರೆ. 

   ಹಲ್ಮಡಿ ಶಾಸನದ ಪ್ರತಿಕೃತಿಗೆ ಮಲಪ್ರಭೆ, ಘಟಪ್ರಭೆ, 1 ದೂಧಗಂಗಾ, ಹಿರಣ್ಯಕೇಶಿ ಹಾಗೂ ಕೃಷ್ಣಾ ನದಿಗಳ ಪವಿತ್ರ ಜಲದ ಜಲಾಭಿಷೇಕ ಹಾಗೂ ಕ್ಷೀರಾಭಿಷೇಕ ನಡೆಯಲಿದೆ. ಈ ಪೂಜಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಹಲ್ಮಡಿ ಶಾಸನದ ಪೂಜೆ ಹಾಗೂ ಪಾಲಿಕೆ ಮುತ್ತಿಗೆ ಕಾರ್ಯಕ್ರಮದಲ್ಲಿ ಅಭಿಮಾನಿ ಕನ್ನಡಿಗರು, ಸಂಘ ಸಂಸ್ಥೆಗಳು ಭಾಗವಹಿಸಬೇಕೆಂದು 20 ಕನ್ನಡ ಪರ ಸಂಘಟನೆಗಳು ಮನವಿ ಮಾಡಿವೆ.