ಪ್ರಪಂಚಕ್ಕೆ ಸವಾಲಾಗಿರುವ ಹೆಪಟೈಟಿಸ್ ಬಿ ವೈರಸ್

ಮಳೆಗಾಲದಲ್ಲಿ ಹಲವಾರು ರೀತಿಯ ಕಾಯಿಲೆಗಳು ಶುರುವಾಗುತ್ತವೆ ಹೀಗಾಗಿ ಮಳೆಗಾಲದಲ್ಲಿ ಆರೋಗ್ಯದ ಕಡೆ ತುಂಬಾ ಕಾಳಜಿವಹಿಸಬೇಕು. ಅದರಲ್ಲೂ ಕಲುಷಿತ ನೀರಿನ ಬಗ್ಗೆ ಹಾಗೂ ಸೊಳ್ಳೆಯ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕು ಏಕೆಂದರೆ ಮಳೆಗಾಲದಲ್ಲಿ ಹೆಚ್ಚಾಗಿ ಕಾಮಾಲೆ (ಜಾಂಡೀಸ್) ಪ್ರಕರಣಗಳು ಹೆಚ್ಚಾಗುತ್ತವೆ. ಇದು ನಮ್ಮ ಯಕೃತ್‌ನ ಕಾರ್ಯಚಟುವಟಿಕೆಗಳನ್ನು ಏರಿಪೇರು ಮಾಡುತ್ತದೆ.  

ಜನಸಾಮಾನ್ಯರಲ್ಲ್ಲಿ ಹೆಪಟೈಟಿಸ್ “ಬಿ” ಕುರಿತಾಗಿ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವವ್ಯಾಪಿ ಬರುವ ಜುಲೈ 28 ರಂದು “ವಿಶ್ವ ಹೆಪಟೈಟಿಸ್ ದಿನ” ವನ್ನಾಗಿ ಆಚರಿಸಲಾಗುತ್ತದೆ.  

ಹೆಪಟೈಟಿಸ್ ಬಿ ಎಂಬುದು ಜಾಗತಿಕ ಆರೋಗ್ಯ ಸಮಸ್ಯಯಾಗಿದ್ದು, ಹೆಪಟೈಟಿಸ್ ಬಿ ವೈರಸ್ ನಿಂದ ಉಂಟಾಗುವ ಯಕೃತ್ತಿನ ಸೋಂಕು. ಇದು ದೀರ್ಘಕಾಲದ ಸೋಂಕನ್ನು ಉಂಟುಮಾಡಿ ಸಿರೋಸಿಸ್, ಪಿತ್ತಜನಕಾಂಗದ ಕಾಯಿಲೆಗೆ ಕಾರಣವಾಗುತ್ತದೆ. 

 ನಾನು ಹೆಪಟೈಟಿಸ್ “ಬಿ” ಕುರಿತಾಗಿ ವೈಧ್ಯಕೀಯ ಲೇಖನ ಬರೆಯಲು ನಗರದ ಹೆಸರಾಂತ ಯಕೃತ್ತು ಮತ್ತು ಗ್ಯಾಸ್ಟ್ರೋಎಂಟರಾಲಜಿ ತಜ್ಞ ವೈಧ್ಯರಾದ ಡಾ.ವರದರಾಜ ಗೋಕಾಕ ಅವರನ್ನು ಮೊನ್ನೆ ಭೇಟಿಯಾಗಿದ್ದೆ. ಅವರು ತಮ್ಮ ಬಿಡಿವಿಲ್ಲದ ಸಮಯದಲ್ಲೂ ಖುಶಿಯಿಂದ ಬರಮಾಡಿಕೊಂಡು  ಹೆಪಟೈಟಿಸ್ “ಬಿ” ಕುರಿತಾಗಿ ಸವಿಸ್ತಾರವಾಗಿ ಹೇಳಿದರು. ಅವರು ಹೇಳಿರುವುದನ್ನು ಯತಾವಥ್ ಲೇಖನ ರೂಪದಲ್ಲಿ ಬರೆದು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಪ್ರಯತ್ನ ನನ್ನದು. 

ಅವರು ಹೇಳುವಂತೆ ಯಕೃತ್ತು ಉತ್ತಮ ಆರೋಗ್ಯಕ್ಕೆ ನೆರವಾಗುವ ಮಾನವನ ಅಂಗಾಂಗಗಳಲ್ಲಿ ಒಂದಾಗಿದ್ದು, ಯಕೃತ್ತು ದೇಹದ ಎರಡನೆ ಅತೀ ದೊಡ್ಡ ಅಂಗವಾಗಿದೆ. ಇದು ದೇಹದಲ್ಲಿ ರಸಾಯನಿಕ ಕಾರ್ಖಾನೆ ಇದ್ದಂತೆ ಕೊಲೆಸ್ಟ್ರಾಲ್ ಹಾಗೂ ಕೊಬ್ಬುಗಳ ಚಯಾಪಚಯ, ಸಂಭವನೀಯ ಹಾನಿಕಾರಕ ಅಂಶಗಳ ನಂಜು ನಿರ್ಮೂಲನೆ, ಸೇವಿಸಿದ ಓಷಧಗಳ ಸಂಸ್ಕರಣೆ ಹಾಗೂ ದೇಹದ ತ್ಯಾಜ್ಯ ಉತ್ಪನ್ನಗಳು ಹಾಗೂ ವಿಷಕಾರಿ ಪದಾರ್ಥಗಳ ವಿಸರ್ಜನೆ, ರಕ್ತ ರಚನೆ, ಪ್ರತಿಕಾಯ ಉತ್ಪಾದನೆ ಇತ್ಯಾದಿ ಕೆಲಸಗಳನ್ನು ಯಕೃತ್ತು ನಿರ್ವಹಿಸುತ್ತದೆ. 

ಪ್ರತಿ ದಿನ ಯಕೃತ್ತು ಸುಮಾರು 800 ರಿಂದ 1000 ಮಿಲಿ ಪಿತ್ತ ರಸವನ್ನು ಸ್ರವಿಸುತ್ತದೆ. ಇದು ಆಹಾರದಲ್ಲಿನ ಕೊಬ್ಬಿನ ಜೀರ್ಣಕ್ರಿಯೆಗೆ ಅಗತ್ಯವಾದ ಪಿತ್ತರಸ ಲವಣಗಳನ್ನು ಹೊಂದಿರುತ್ತದೆ.  

ಯಕೃತ್ತು ಸಕ್ಕರೆಗಳನ್ನು ಗ್ಲೈಕೊಜೆನ್ ಆಗಿ ಪರಿವರ್ತಿಸಿ ಇದು ಶಕ್ತಿಯ ಉತ್ಪಾದನೆಗೆ ಅಗತ್ಯವಿರುವವರೆಗೆ ತನ್ನಲ್ಲಿ ಸಂಗ್ರಹಿಸುತ್ತದೆ. ನಂತರ ಅದನ್ನು ಗ್ಲೂಕೋಸ್ ಆಗಿ ಪರಿವರ್ತಿಸಿ ರಕ್ತಪ್ರವಾಹಕ್ಕೆ ಬಿಡುಗಡೆ ಮಾಡುತ್ತದೆ. ಯಕೃತ್ತು ಅಲ್ಯುಮಿನ್ ಸೇರಿದಂತೆ ರಕ್ತದ ಸಿರಮ್ ಪ್ರೋಟೀನ್‌ಗಳನ್ನು ಉತ್ಪಾದಿಸುತ್ತದೆ.  

ಪ್ರಪಂಚದಾದ್ಯಂತ ಲಕ್ಷಾಂತರ ಜನರು ವೈರಲ್ ಹೆಪಟೈಟಿಸ್ ಹೊಂದಿದ್ದಾರೆಂದು ಸಂಶೋಧನೆಯಿಂದ ತಿಳಿದುಬಂದಿದ್ದು, ಸೋಂಕು ಉಂಟಾದ ಆರಂಭದ ದಿನಗಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲವಾದ್ದರಿಂದ ಶೇಕಡಾ 90ಅ ಕ್ಕಿಂತ ಹೆಚ್ಚು ಜನರಿಗೆ ತಾವು ಹೆಪಟೈಟಿಸ್ ವೈರಸ್‌ದಿಂದ ಸೋಂಕಿತರಾಗಿರುವುದು ತಿಳಿದುಬರುವುದಿಲ್ಲ.  

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 325 ದಶಲಕ್ಷಕ್ಕೂ ಹೆಚ್ಚು ಜನರು ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಸೋಂಕು ಹೊಂದಿದ್ದಾರೆಂದು ಅಂದಾಜಿಸಲಾಗಿದೆ. 

ಹೆಪಟೈಟಿಸ್ ವೈರಸ್‌ಗಳಲ್ಲಿ ಸಾಮಾನ್ಯವಾಗಿ 7 ವಿಧಗಳಿದ್ದು, ಅವುಗಳನ್ನು ಎ,ಬಿ,ಸಿ,ಇ, ಎಂದು ವಿಂಗಡಿಸಲಾಗಿದೆ 

ಭಾರತದಲ್ಲಿ ಇತ್ತೀಚಿನ ಅಂದಾಜಿನ ಪ್ರಕಾರ 40 ಮಿಲಿಯನ್ ಜನರು ದೀರ್ಘಕಾಲದ ಹೆಪಟೈಟಿಸ್ ಬಿ ಸೋಂಕಿಗೆ ಒಳಗಾಗಿದ್ದಾರೆ. ಮತ್ತು 6 ರಿಂದ 12 ಮಿಲಿಯನ್ ಜನರು ದೀರ್ಘಕಾಲಿಕವಾಗಿ ಹೆಪಟೈಟಿಸ್ ಸಿ ಸೋಂಕಿಗೆ ಒಳಗಾಗಿದ್ದಾರೆ ಅಂದಾಜಿಸಲಾಗಿದೆ. 

ಹೆಪಟೈಟಿಸ್ ಎ ಮತ್ತು ಇ ವೈರಲ್ ಸೋಂಕುಗಳು ವಿಭಿನ್ನ ರೀತಿಯಲ್ಲಿ ಹರಡಬಹುದಾಗಿದ್ದು,  ಸೋಂಕಿತ ವ್ಯಕ್ತಿಯ ಮಲದಿಂದ, ಕುಲುಷಿತ ನೀರು ಅಥವಾ ಆಹಾರವನ್ನು ಸೇವಿಸುವ ಮೂಲಕ ಹರಡುತ್ತದೆ. ಹೆಪಟೈಟಿಸ್ ಎ ಮತ್ತು ಇ ಸೋಂಕು ಅಲ್ಪಾವಧಿಯ ಹೆಪಟೈಟಿಸ್‌ಗೆ ಕಾರಣವಾಗಬಹುದು. ಇಂಥ ಪ್ರಕರಣಗಳಲ್ಲಿ ಮನುಷ್ಯನ ದೇಹದ ಚರ್ಮ ಮತ್ತು ಕಣ್ಣು ಹಳದಿ ಬಣ್ಣಕ್ಕೆ ತಿರುಗುತ್ತದೆ. ಸೋಂಕಿತ ವ್ಯಕ್ತಿಗೆ ವಾಂತಿ, ಕಿಬ್ಬೊಟ್ಟೆ ನೋವು, ವಾಕರಿಕೆ, ಹೊಟ್ಟೆಯಲ್ಲಿ ಅಸಮಾಧಾನ, ಅತಿಯಾದ ಸುಸ್ತು, ಹಸಿವೆ ಆಗದೇ ಇರುವುದು ಇತ್ಯಾದಿ ಲಕ್ಷಣಗಳು ಹಲವು ವಾರಗಳವರೆಗೆ ಮುಂದುವರೆಯಬಹುದು ಇದಕ್ಕೆ ಚಿಕಿತ್ಸೆಗಳಿದ್ದು ಕೂಡಲೇ ವೈಧ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದುದಾಗಿ. 

ಆದರೆ ಹೆಪಾಟೈಟಿಸ್ ಬಿ ವೈರಸ್ ರೋಗಕ್ಕೆ ಸಿಲುಕುವ ಅಪಾಯ ಹುಟ್ಟಿನಿಂದ ಆರಂಬವಾಗುತ್ತದೆ. ಜನನ ಸಮಯದಲ್ಲಿ ಸೋಂಕಿತ ತಾಯಿಯಿಂದ ಮಗುವಿಗೆ  (ಪೆರಿನೇಟನಲ್ ಟ್ರಾನ್ಸ್ಮಿಷನ್)  ಸೋಂಕಿತ ವ್ಯಕ್ತಿಯ ರಕ್ತದ ಸಂಪರ್ಕದಿಂದ, ಸೋಂಕಿತ ವ್ಯಕ್ತಿಯೊಂದಿಗೆ ಹಲ್ಲುಜ್ಜುವ ಬ್ರಶ್‌ಗಳು ಅಥವಾ ಬ್ಲೇಡಗಳು  ಸೋಂಕಿತ ವ್ಯಕ್ತಿಗೆ ಬಳಿಸಿದ  ಸೂಜಿಗಳು, ಸಿರಿಂಜ್‌ಗಳು ಈ ರೀತಿಯ ವಸ್ತುಗಳನ್ನು ಹಂಚಿಕೊಂಡಾಗ ಅಥವಾ ಬೇರೊಬ್ಬ ವ್ಯಕ್ತಿಗೆ ಬಳಿಸಿದಾಗ ಬರಬಹುದಾಗಿದೆ. ಸೋಂಕು ತಗುಲುವ ಎಲ್ಲರಲ್ಲೂ ರೋಗ ಲಕ್ಷಣಗಳು ಕೂಡಲೇ ಕಂಡುಬರುವುದಿಲ್ಲ.  

ಹೆಪಟೈಟಿಸ್ ಬಿ ಅಥವಾ ಸಿ ವೈರಸ್ ಹೊಂದಿರುವ ವ್ಯಕ್ತಿಯೊಂದಿಗೆ ಊಟ ಬಟ್ಟಲು ಅಥವಾ ಪಾತ್ರೆಗಳನ್ನು ಹಂಚಿಕೊಳ್ಳುವ ಮೂಲಕ ಹರಡುವುದಿಲ್ಲ. ಸ್ತನ್ಯಪಾನ, ಅಪ್ಪಿಕೊಳ್ಳುವುದು, ಚುಂಬಿಸುವುದು ಕೈ ಹಿಡಿಯುವದು, ಕೆಮ್ಮುವುದು ಅಥವಾ ಸೀನುವುದುರಿಂದಲೂ ಇದು ಹರಡುವುದಿಲ್ಲ. 

ಹೆಪಟೈಟಿಸ್ ಬಿ ವೈರಸ್ ಸೋಂಕು ಹೊರತುಪಡಿಸಿ ಮಧ್ಯಸಾರ, ಓಷಧಿಗಳು, ಸ್ವಯಂ ನಿರೋಧಕ ಶಕ್ತಿ ಮತ್ತು ಪಿತ್ತಜನಕಾಂಗದ ಕೊಬ್ಬಿನ ಕಾಯಿಲೆ ಕಾರಣಗಳಿಂದ ಬರಬಹುದಾಗಿದೆ. ಇಂಥ ಪರಿಸ್ಥಿತಿಗಳಲ್ಲಿ ಯಕೃತ್ತು ಮತ್ತು ಗ್ಯಾಸ್ಟ್ರೋಎಂಟರಲಜಿ ತಜ್ಞ ವೈಧ್ಯರಲ್ಲಿ ತೋರಿಸಿ ಚಿಕಿತ್ಸೆ ಪಡೆಯಬಹುದಾಗಿದೆ. 

ಚಿಕಿತ್ಸೆ ನಿರ್ಲಕ್ಷಿಸಿದಲ್ಲಿ ದೀರ್ಘಾವಧಿಯಲ್ಲಿ ಯಕೃತ್ತಿನಲ್ಲಿನ ಉರಿಯೂತವು ಫೈಬ್ರೋಸಿಸ್, ಸಿರೋಸಿಸ್ ಮತ್ತು ವಿರಳವಾದ ಯಕೃತ್ತಿನ ಗಂಭೀರ ಕಾಯಿಲೆಗೆ ಕಾರಣವಾಗಬಹುದು. 

ಪ್ರತಿಯೊಬ್ಬ ವಯಸ್ಕರು ಹೆಪಟೈಟಿಸ್ ಬಿ ಮತ್ತು ಸಿ ಗಾಗಿ ಪರೀಕ್ಷಿಸಿಕೊಳ್ಳಬೇಕು. ವೈರಲ್ ಸೋಂಕಿನ ಚಿಕಿತ್ಸೆಯು ಸೋಂಕಿನ ಪ್ರಕಾರ ಮತ್ತು ರೋಗಿಯ ಲಕ್ಷಣಗಳು ಮತ್ತು ರಕ್ತ ಪರೀಕ್ಷೆಗಳ ಮೇಲೆ ಅವಲಂಭಿತವಾಗಿರುತ್ತದೆ. ಹೆಪಟೈಟಿಸ್ ಎ/ಇ ಸೋಂಕು ಸ್ವಯಂ ಸಿಮಿತ ಕಾಯಿಲೆಗಳಾಗಿದ್ದು, ಇದನ್ನು ಸಾಮಾನ್ಯವಾಗಿ ಪೋಷಕ ಆರೈಕೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ರೋಗ ಲಕ್ಷಣಗಳು ಮುಂದುವರೆದರೆ ಅಥವಾ ತೀವೃವಾಗಿದ್ದರೆ  ನಿಮಗೆ ಆಸ್ಪತ್ರೆ ಅಗತ್ಯವಿದೆ. ಹೆಪಟೈಟಿಸ್ ಎ ಸೋಂಕಿಗೆ ಪರಿಣಾಮಕಾರಿ ಲಸಿಕೆ ಲಭ್ಯವಿದೆ. 

ಹೆಪಟೈಟಿಸ್ “ಬಿ” ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಲಸಿಕೆ ತೆಗೆದುಕೊಳ್ಳುವುದು. ಹೆಪಟೈಟಿಸ್ ಬಿ ಲಸಿಕೆ ಸುರಕ್ಷಿತ ಪರಿಣಾಮಕಾರಿ ಮತ್ತು ಈ ರೋಗವನ್ನು ತಪ್ಪಿಸುವ ಏಕೈಕ ಮಾರ್ಗವಾಗಿದೆ. 

ಲಸಿಕೆಯನ್ನು ಮೂರು ಸರಣಿಯಲ್ಲಿ ನೀಡಲಾಗುತ್ತದೆ.  ನೀವು ಬಾಲ್ಯದಲ್ಲಿ ಲಸಿಕೆಯನ್ನು ಹೊಂದಿಲ್ಲದಿದ್ದರೆ ವಯಸ್ಕರಾಗಿಯೂ ಲಸಕೆಗಳನ್ನು ಪಡೆಯಬಹುದು. ವಯಸ್ಕರು ಸಾಧ್ಯವಾದಷ್ಟು ಬೇಗ ಹೆಪಟೈಟಿಸ್ “ಬಿ” ಲಸಿಕೆಯುವುದು ಉತ್ತಮ. 

ಹೆಪಟೈಟಿಸ್ ಬಿ ಹೊಂದಿರುವವರು ವೈರಸ್‌ನ್ನು ನಿರ್ವಹಿಸಲು ಮತ್ತು ಯಕೃತ್ತು ಆರೋಗ್ಯಕರವಾಗಿರಲು ಅಲ್ಕೋಹಾಲ್ ಮತ್ತು ಮಾದಕವಸ್ತುಗಳನ್ನು ತ್ಯಜಿಸಬೇಕು. ಇವುಗಳು ನಿಮ್ಮ ಯಕೃತ್ತನ್ನು ಹಾನಿಗೊಳಿಸುತ್ತವೆ. ಮತ್ತು ವೈರಸ್‌ನ್ನು ನಿಯಂತ್ರಿಸಲು ಆರೋಗ್ಯಕರ ಆಹಾರವನ್ನು ಸೇವಿಸಬೇಕು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಇದು ನಿಮ್ಮ ಯಕೃತ್ತನ್ನು ಆರೋಗ್ಯಕರವಾಗಿರಿಸಲು ಮತ್ತು ರೋಗದ ಪ್ರಗತಿಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. 

ಹೆಪಟೈಟಿಸ್ “ಬಿ” ಮತ್ತು “ಸಿ” ಹೊಂದಿರುವ ಜನರು ಗ್ಯಾಸ್ಟ್ರೋಎಂಟರಾಲಜಿಸ್ಟ್‌ ತಜ್ಞ ವೈಧ್ಯರಿಗೆ ನಿಯಮಿತವಾಗಿ ತೋರಿಸಿ ಅಗತ್ಯ ಚಿಕಿತ್ಸೆ ಪಡೆಯಬಹುದು. ಬೈಲಿರುಬಿನ್, ಕೊಲೆಸ್ಟ್ರಾಲ್, ಸೀರಮ್, ಪ್ರೋಟೀನ್‌ಗಳು, ಯೂರಿಯಾ, ಅಮೋನಿಯಾ ಮತ್ತು ವಿವಿಧ ಕಿಣ್ವಗಳ ಅಸಹಜ ಮಟ್ಟವನ್ನು ರಕ್ತ ಪರೀಕ್ಷೆಯ ಮೂಲಕ ಹಾಗೂ ಬಯಾಪ್ಸಿ ಮಾಡುವ ಮೂಲಕ ಯಕೃತ್ತಿನ ಸಮಸ್ಯಯನ್ನು ಕಂಡುಹಿಡಿಯಬಹುದಾಗಿದ್ದು ಹೆದರುವ ಅಗತ್ಯವಿಲ್ಲ. ಹೆಪಟೈಟಿಸ್ ಬಿ ಮತ್ತು ಸಿ ಚಿಕಿತ್ಸೆಗಾಗಿ ಹಲವಾರು ಓಷಧಿಗಳು ಲಭ್ಯವಿದೆ. ಹೆಪಟೈಟಿಸ್ ಬಿ ವಿರುದ್ಧ 98ಅ ರಿಂದ 100ಅ ರಕ್ಷಣೆ ನೀಡುವ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಲಭ್ಯವಿದ್ದು, ಹೆಪಟೈಟಿಸ್ ಬಿ ಸೋಂಕನ್ನು ತಡೆಗಟ್ಟುವುದು.  

ವೈರಸ್‌ಗಳ ದಾಳಿ ಜಗತ್ತಿಗೆ ಹೊಸದಲ್ಲವಾದರೂ ಮನಕುಲದ ಮೇಲೆ ದಾಳಿ ಮಾಡುತ್ತಿರುವುದನ್ನ ಗಮನಿಸಿದರೆ ನಮ್ಮ ಜೀವನಶೈಲಿ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಜೊತೆಗೆ ಈ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತೆ ಕ್ರಮವಾಗಿ ಪರಿಸರ, ಆರೋಗ್ಯ, ಉತ್ತಮ ಗುಣಮಟ್ಟದ ಆಹಾರ, ಗಾಳಿ, ಬೆಳಕು, ನೀರು ಸ್ವಚ್ಛತೆ ಕುರಿತಾಗಿ ಎಚ್ಚರವಹಿಸುವುದು ಮುಖ್ಯವೆನಿಸುತ್ತದೆ.   

- ಅನಂತ ಪಪ್ಪು 

ಮೊ: 9448527870 


- * * * -