ಹೆಗ್ಗಡೆಯವರ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ: ಸವಿತಾ ಅಮರಶೆಟ್ಟಿ

ಹೆಗ್ಗಡೆಯವರ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ: ಸವಿತಾ ಅಮರಶೆಟ್ಟಿ Heggade's social work is commendable: Savita Amarshetty

ಧಾರವಾಡ, 06 : ಇಂದಿನ ದಿನಮಾನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಹಿರಿಯರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಕಾರಣ, ಇದು ನಾವು ಈ ವರ್ತಮಾನದ ನೀಡುತ್ತಿರುವ ಶಿಕ್ಷಣ ಎಂತಹುದು ಎಂಬುದನ್ನು ಸಾರುತ್ತಿದೆ. ಶಿಕ್ಷಣ ಕೇವಲ ಓದು ಬರಹವಲ್ಲ. ಅದು ನೈತಿಕತೆಯಿಂದ ಕೂಡಿರಬೇಕು ಅಂದಾಗ ಮಾತ್ರ ಮಕ್ಕಳಿಗೆ ಸಂಬಂಧಗಳ ಬೆಲೆ ಅರ್ಥವಾಗುತ್ತದೆ ಎಂದು ಧಾರವಾಡದ ಮೃತ್ಯುಂಜಯನಗರದ ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಅಜ್ಜ-ಅಜ್ಜಿಯರಿಗೆ ಕೃತಜ್ಞತಾ ಸಮಾರಂಭವನ್ನು ಉದ್ಘಾಟಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರಿಮತಿ ಸವಿತಾ ಅಮರಶೆಟ್ಟಿಯವರು ಮಾತನಾಡುತ್ತಿದ್ದರು. ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಯಬೇಕೆಂದರೆ ಅದು ಹಿರಿಯರಿಂದ ಕೂಡಿದ ಮನೆಯಿಂದ, ಹಿರಿಯರು ಮಕ್ಕಳಿಗೆ ಕಥೆಗಳನ್ನು ಹೇಳುವ ಮೂಲಕ ಅವರೊಂದಿಗೆ ಲವಲವಿಕೆಯಿಂದ ಆಟವಾಡುತ್ತ ಒಳ್ಳೆಯ ವಿಚಾರಗಳನ್ನು ಮಕ್ಕಳಲ್ಲಿ ತುಂಬುತ್ತಾರೆ. ಅಜ್ಜ-ಅಜ್ಜಿಯರಿಗೆ ಕೃತಜ್ಞತೆ ಸಲ್ಲಿಸುವ ಇಂತಹ ಅತ್ಯದ್ಭುತ ಕಾರ್ಯಗಳನ್ನು ನಾವು ಪೂಜ್ಯ ವೀರೇಂದ್ರ ಹೆಗ್ಗಡೆಯವರ ಸಂಸ್ಥೆಯಲ್ಲಿ ನಾವು ಕಾಣುತ್ತೇವೆ, ಪೂಜ್ಯರು ಧಾರವಾಡದ ಸುತ್ತಮುತ್ತಲು ಕೈಗೊಂಡ ಸಮಾಜಮುಖಿ ಕಾರ್ಯಗಳಿಂದಾಗಿ ಈ ಭಾಗ ಅತ್ಯುತ್ತಮವಾಗಿ ಬೆಳವಣಿಗೆ ಕಂಡಿದೆ ಎಂದು ಹೇಳುತ್ತ, ಪೂಜ್ಯ ಖಾವಂದರ ಹಾಗೂ ಶ್ರೀಮತಿ ಹೇಮಾವತಿ ಅಮ್ಮನವರ ಮತ್ತು ಅವರ ಸಮಾಜಮುಖಿ ಕಾರ್ಯಗಳನ್ನು ನೆನೆಸಿಕೊಂಡರು. 

ಜೆ.ಎಸ್‌.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮಹಾವೀರ ಉಪಾದ್ಯೆ ಮಾತನಾಡಿ, ಅಜ್ಜ- ಅಜ್ಜಿಯರು ವಿಭಕ್ತ ಕುಟುಂಬದಿಂದಾಗಿ ವೃದ್ಧಾಶ್ರಮಗಳಲ್ಲಿ ಕಾಣಸಿಗುತ್ತಿದ್ದಾರೆ, ಆದುದರಿಂದ ಅವಿಭಕ್ತ ಕುಟುಂಬದ ಮಹತ್ವ ತಿಳಿಸಲು ಈ ಕಾರ್ಯಕ್ರಮ ಏರಿ​‍್ಡಸಲಾಗಿದೆ, ಧರ್ಮಸ್ಥಳದ ಶೈಕ್ಷಣಿಕ ಸಂಸ್ಥೆಗಳು ನೈತಿಕ ನೆಲೆಗಟ್ಟಿನ ಮೇಲೆ ಶಿಕ್ಷಣ ನೀಡುತ್ತಿವೆ. ಜನತಾ ಶಿಕ್ಷಣ ಸಂಸ್ಥೆಯು ಶಿಕ್ಷಣ ನೀಡಿವುದರ ಜೊತೆಗೆ  ಸಂಸ್ಕಾರ ನೀಡುತ್ತಿದೆ. ಧಾರವಾಡದ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುವ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಈ ಶಾಲೆಯನ್ನು ಪೂಜ್ಯ ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದರು. 1200 ವಿದ್ಯಾಥಿಗಳನ್ನು ಹೊಂದಿದರುವ ಈ ಶಾಲೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ತಿಳಿಸಿದರು. 

ಇನ್ನೋರ್ವ ಅತಿಥಿಗಳಾದ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದ ಕಾರ್ಯದರ್ಶಿಗಳಾದ ಶ್ರೀ ಶಂಕರ ಕುಂಬಿಯವರು ಮಾತನಾಡಿ, ಮನೆಯಲ್ಲಿ ಅಜ್ಜ-ಅಜ್ಜಿಯರು ಮೊಮ್ಮಕ್ಕಳಿಗೆ ನೀಡುವ ಪ್ರೀತಿ, ಕಾಳಜಿ ಉತ್ತಮವಾದ ಮಾರ್ಗದರ್ಶನ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವನ್ನು ಕಲಿಸುತ್ತವೆ ಹಿರಿಯರ ಬಗ್ಗೆ ಕಾಳಜಿವಹಿಸುವುದು ಪಾಲಕರ ಜವಾಬ್ದಾರಿ ಆಗಿದೆ ಎಂದು ಹೇಳಿದರು. 

 ಕಾಯಕ್ರಮಕ್ಕೆ ಬಂದ 600ಕ್ಕೂ ಹೆಚ್ಚು ಅಜ್ಜ-ಅಜ್ಜಿಯರಿಗೆ, ಹಿರಿಯರಿಗೆ ಮನೊರಂಜನಾ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು, ಅವರು ಆಟಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ತಂದರು. ವಿಜೇತರಿಗೆ ಬಹುಮಾನಗಳನ್ನು ಸಹ ವಿತರಿಸಲಾಯಿತು.  

ಶಾಲೆಯ ಪ್ರಾಚಾರ್ಯೆ ತ್ರಿವೇಣಿ. ಆರ್, ಕಾರ್ಯಕ್ರಮ ಸಂಯೋಜಕರಾದ ಸೌಭಾಗ್ಯಾ ದಂಡವತಿ ಮತ್ತು ಜಯಾ ವಾಲಿ ಇವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಂಧ್ಯಾರಾಣಿ ಪ್ರಾರ್ಥಿಸಿದರು. ಸುಶೀಲಾ ಬಡಿಗೇರ ಸ್ವಾಗತಿಸಿದರು. ಆರತಿ ಕುಲಾಲಗಾರ ವಂದಿಸಿದರು, ತನುಜಾ ನಾಯಕ್ ನಿರೂಪಿಸಿದರು.