ರಿಯೊ ಡಿ ಜನೈರೊ, ಜ. 28 ,ಆಗ್ನೇಯ ಬ್ರೆಜಿಲ್‌ನಲ್ಲಿ ಭಾರಿ ಪ್ರವಾಹ ಉಂಟಾಗಿ 58 ಜನರು ಸಾವನ್ನಪ್ಪಿದ್ದು, 40,000 ಜನರು ಸ್ಥಳಾಂತರಗೊಂಡಿದ್ದಾರೆ ಎಂದು ನಾಗರಿಕ ರಕ್ಷಣಾ ಸಂಸ್ಥೆ ಮಂಗಳವಾರ ತಿಳಿಸಿದೆ. ಮಿನಾಸ್ ಗೆರೈಸ್‌ನಲ್ಲಿ ಶುಕ್ರವಾರ ಭಾರಿ ಮಳೆಯಿಂದಾಗಿ 47 ಜನರು ಸಾವನ್ನಪ್ಪಿದ್ದಾರೆ, ನಾಲ್ವರು ಕಾಣೆಯಾಗಿದ್ದಾರೆ ಮತ್ತು 65 ಮಂದಿ ಗಾಯಗೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.ಮಣ್ಣು ಕುಸಿತದ ಪರಿಣಾಮವಾಗಿ ಬೆಲೊ ಹೊರಿಜಾಂಟೆ ಎಂಬಲ್ಲಿ 13 ಜನರು ಸಾವನ್ನಪ್ಪಿದ್ದಾರೆ.ಎಸ್ಪಿರಿಟೊ ಸ್ಯಾಂಟೊದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದರೆ, ರಿಯೊ ಡಿ ಜನೈರೊದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.ಮಿನಾಸ್ ಗೆರೈಸ್ ರಾಜ್ಯದ ರಾಜಧಾನಿ ಬೆಲೊ ಹೊರಿಜಾಂಟೆದಲ್ಲಿ ಶುಕ್ರವಾರ 24 ಗಂಟೆಗಳ ಅವಧಿಯಲ್ಲಿ 171.8 ಮಿ.ಮೀ ಮಳೆಯಾಗಿದ್ದು, ಇದು 110 ವರ್ಷಗಳಲ್ಲಿ ಈ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಬ್ರೆಜಿಲ್‌ನ ರಾಷ್ಟ್ರೀಯ ಹವಾಮಾನ ಸಂಸ್ಥೆ ತಿಳಿಸಿದೆ.ಕಳೆದ ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೊಡ್ಡ ಹಾನಿಯಾಗಿರುವ ರಿಯೊ ಡಿ ಜನೈರೊ, ಮಿನಾಸ್ ಗೆರೈಸ್ ಮತ್ತು ಎಸ್ಪಿರಿಟೊ ಸ್ಯಾಂಟೊ ರಾಜ್ಯಗಳನ್ನು ಬ್ರೆಜಿಲ್ ಸರ್ಕಾರ ವಿಪತ್ತು ರಾಜ್ಯಗಳೆಂದು ಘೋಷಿಸಿದೆ.