ಬೆಂಗಳೂರು, ಮೇ 20,ಕೊರೊನಾ ಎಂದು ತಲೆಕೆಡಿಕೊಂಡಿದ್ದ ಬೆಂಗಳೂರಿಗೆ ಬುಧವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಭಾರೀ ಶಬ್ದವೊಂದು ಆತಂಕ ಸೃಷ್ಟಿಸಿತ್ತು. ಮಧ್ಯಾಹ್ನ 1.45 ಸುಮಾರಿಗೆ ಸ್ಫೋಟದಂತಹ ಶಬ್ದ ಕೇಳಿದ್ದ ಬೆಂಗಳೂರಿಗರು ಬೆಚ್ಚಿಬಿದ್ದಿದ್ದರು.ಸರ್ಜಾಪುರ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಮಾರತ್ ಹಳ್ಳಿ, ಇಂದಿರಾನಗರ, ಹೆಬ್ಬಾಳ, ಜೆ.ಪಿ.ನಗರ, ಕೆ.ಆರ್.ಪುರಂ ಸೇರಿದಂತೆ ಅನೇಕ ಕಡೆ ಭಾರಿ ಸದ್ದಾಗಿದ್ದನ್ನು ಕೇಳಿದ ಜನರು ಮನೆಯಿಂದ ಹೊರಬಂದರು.
ವಿಮಾನ ಉರುಳಿತಾ, ಯಾವುದೋ ಫ್ಯಾಕ್ಟರಿಯಲ್ಲಿ ಸ್ಫೋಟವೇ? ಅಲ್ಲ ಭೂಕಂಪವೇ ಎಂಬ ಮಾತುಗಳು ಕೂಡ ಕೇಳಿಬಂತು.ಈ ಸದ್ದು ಬೆಂಗಳೂರಿಗರ ನಿದ್ದೆಗೆಡಿಸಿದ್ದು ಮಾತ್ರವಲ್ಲ ಸುದ್ದಿ ಕೇಂದ್ರಕ್ಕೂ ಬಂದು ಭಾರೀ ಸದ್ದು ಮಾಡಿತು. ಸುದ್ದಿ ಕೇಂದ್ರಕ್ಕೆ ಬಂದಿದ್ದೇ ತಡ ಹತ್ತಾರು ಅಂತೆಕಂತೆಗಳು ಸೃಷ್ಟಿಯಾದವು.ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಪ್ರತಿಕ್ರಿಯಿಸಿದ್ದು, ಇದು ಭೂಕಂಪನದಿಂದಾದ ಶಬ್ದವಲ್ಲ. ನಗರಾದ್ಯಂತ ಫೈಟರ್ ಜೆಟ್ ಗಳು ಹಾರಾಟ ನಡೆಸುತ್ತಿದ್ದು, ಇವುಗಳಿಂದ ಈ ರೀತಿ ಶಬ್ದ ಹೊರಹೊಮ್ಮಿದೆ ಎಂದಿದ್ದಾರೆ.ಆದರೆ ಶ್ರೀನಿವಾಸ ರೆಡ್ಡಿ ಅವರ ಹೇಳಿಕೆಯನ್ನು ಎಚ್.ಎ.ಎಲ್ ತಳ್ಳಿ ಹಾಕಿದ್ದು, ಈ ಶಬ್ದಕ್ಕೂ ಫೈಟರ್ ಜೆಟ್ ಗೂ ಯಾವುದೇ ಸಂಬಂಧವಿಲ್ಲ ಎಂದಿದೆ. ಹಾಗಾದರೆ ನಿಜಕ್ಕೂ ಇದು ಯಾವ ಶಬ್ದ ಎಂಬ ಬಗ್ಗೆ ಟ್ವಿಟರ್ ನಲ್ಲಿ ಚರ್ಚೆ ಜೋರಾಗಿದೆ.ಅಂಫಾನ್ ಚಂಡಮಾರುತದಿಂದಾಗಿ ಈ ಶಬ್ಧ ಬಂದಿರಬಹುದು ಎಂಬ ಮಾತುಗಳು ಕೇಳಬಂದಿವೆ.ಶಬ್ಧ ಉಂಟಾದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ತಜ್ಞರ ವರದಿಯ ಬಳಿಕ ಕಾರಣ ತಿಳಿಯಲಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.