ಹಾವೇರಿ: ಶ್ರೀ ಕನಕ ಗುರುಪೀಠದಲ್ಲಿ ಗುರುಪೂಜಾ ಮಹೋತ್ಸವ

ಹಾವೇರಿ: ಶ್ರೀ ಕನಕ ಗುರುಪೀಠದಲ್ಲಿ ಗುರುಪೂಜಾ ಮಹೋತ್ಸವ Haveri: Guru Puja festival at Sri Kanaka Guru Peetha

 ಹಾವೇರಿ, ಜುಲೈ 31: ಜಿಲ್ಲೆಯ ಕಾಗಿನೆಲೆ ಶ್ರೀ ಕನಕ ಗುರುಪೀಠದಲ್ಲಿ ಪರಮಪೂಜ್ಯ ಬ್ರಹ್ಮಲೀನ ಜಗದ್ಗುರು ಶ್ರೀ ಬಿಲೇರೇಂದ್ರ ಕೇಶವ ಕಾರ್ತಿಕಾನಂದಪುರಿ ಮಹಾಸ್ವಾಮೀಜಿಯವರ 20ನೇ ವರ್ಷದ ಪುಣ್ಯಾರಾಧನೆ ಹಾಗೂ ಗುರುಪೂಜಾ ಮಹೋತ್ಸವವು ಶ್ರೀಮಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಜರುಗಿತು.  

ಶ್ರೀ ಬಿಲೇರೇಂದ್ರ ಕೇಶವ ಕಾರ್ತಿಕಾನಂದಪುರಿ ಮಹಾಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗುರುಪೂರ್ಣಿಮೆ ಅಂಗವಾಗಿ ಚಿತ್ರದುರ್ಗ ಜಿಲ್ಲಾ ಕುರುಬ ಸಂಘ ಹಾಗೂ ಶ್ರೀಮಠದ ಭಕ್ತರು ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಿದರು.  

ಆಶೀರ್ವಚನ ನೀಡಿದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಯವರು, “ತಂದೆ-ತಾಯಿ ಹಾಗೂ ಗುರುಗಳಿಗೆ ಸಮಾನ ಗೌರವ ನೀಡಬೇಕು. ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉಪಯುಕ್ತವಾದ ಬದುಕು ನಡೆಸಬೇಕು” ಎಂದು ಕರೆ ನೀಡಿದರು.  

“ತಂದೆ-ತಾಯಿ ನಮಗೆ ಜನ್ಮ ನೀಡಿ, ಬೆಳೆಸಿ, ಬದುಕಿನ ದಾರಿ ತೋರಿಸುತ್ತಾರೆ. ಅವರ ಋಣ ತೀರಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಂದೆ-ತಾಯಿಯನ್ನು ಗೌರವದಿಂದ ಕಾಣಬೇಕು. ಗುರುಗಳು ಜ್ಞಾನ ಮತ್ತು ಮಾರ್ಗದರ್ಶನ ನೀಡುವ ಮೂಲಕ ನಮ್ಮ ಬದುಕಿಗೆ ದಾರೀದೀಪವಾಗುತ್ತಾರೆ” ಎಂದು ಹೇಳಿದರು.  

ಕನಕದಾಸರ ಕುರಿತು ಮಾತನಾಡಿದ ಶ್ರೀಗಳು, “ಕನಕದಾಸರು ಕೇವಲ ಭಕ್ತರಾಗಿರಲಿಲ್ಲ. ಅವರು ಸಮಾಜದಲ್ಲಿನ ಅಸಮಾನತೆ, ಅಜ್ಞಾನ ಮತ್ತು ಮೂಢನಂಬಿಕೆಗಳ ವಿರುದ್ಧ ತಮ್ಮ ಸಾಹಿತ್ಯದ ಮೂಲಕ ಧ್ವನಿ ಎತ್ತಿದ ಮಹಾನ್ ಸಂತ ಹಾಗೂ ದಾರ್ಶನಿಕರಾಗಿದ್ದರು. ಅವರ ಕೀರ್ತನೆಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ” ಎಂದರು.  

“ಕನಕದಾಸರ ಜೀವನ ನಮಗೆ ಮಹತ್ವದ ಸಂದೇಶ ನೀಡುತ್ತದೆ. ನಾವು ಎಷ್ಟು ವರ್ಷ ಬದುಕಿದ್ದೇವೆ ಎಂಬುದಕ್ಕಿಂತ, ಬದುಕಿದಷ್ಟು ಕಾಲ ಸಮಾಜಕ್ಕೆ ಎಷ್ಟು ಉಪಯುಕ್ತವಾಗಿದ್ದೇವೆ ಎಂಬುದು ಮುಖ್ಯ. ನೀತಿ, ಪ್ರಾಮಾಣಿಕತೆ, ಸಹಬಾಳ್ವೆ, ಜ್ಞಾನ ಮತ್ತು ಮಾನವೀಯತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ” ಎಂದು ಶ್ರೀಗಳು ಹೇಳಿದರು.  

ಮಾನವನು ಸಮಾಜಕ್ಕೆ ತನ್ನಿಂದಾದ ಕೊಡುಗೆ ನೀಡಬೇಕು ಎಂಬ ಸಂದೇಶ ನೀಡಿದ ಶ್ರೀಗಳು, “ಕೋಳಿ ಮೊಟ್ಟೆ ನೀಡುತ್ತದೆ, ಹಸು ಹಾಲು ನೀಡುತ್ತದೆ, ಹೂವು ಮಕರಂದ ನೀಡುತ್ತದೆ. ಇವೆಲ್ಲವನ್ನೂ ಪಡೆಯುವ ಮನುಷ್ಯ ಸಮಾಜಕ್ಕೆ ಏನು ಕೊಡುಗೆ ನೀಡುತ್ತಾನೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದು ಹೇಳಿದರು.  

ಕನಕದಾಸರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದ ಶ್ರೀಗಳು, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.  

ಈ ಸಂದರ್ಭದಲ್ಲಿ ಸಂಜೆ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಶ್ರೀ ರೇವಣಸಿದ್ದೇಶ್ವರ, ಶ್ರೀ ಬೀರಲಿಂಗೇಶ್ವರ, ಶ್ರೀ ಮೈಲಾರಲಿಂಗೇಶ್ವರ ಹಾಗೂ ಶ್ರೀ ಮಹಾನಂದೇಶ್ವರ ಸೇರಿದಂತೆ ವಿವಿಧ ದೇವರುಗಳ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.  

ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶರಣಾನಂದಪುರಿ ಮಹಾಸ್ವಾಮೀಜಿಯವರು, ಪರಮಪೂಜ್ಯ ಶ್ರೀ ಶಿವಾನಂದಪುರಿ ಮಹಾಸ್ವಾಮೀಜಿಯವರು, ಶ್ರೀಮಠದ ಆಡಳಿತಾಧಿಕಾರಿ ಎಸ್‌.ಎನ್‌. ಗಾಜಿಗೌಡ, ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ನಾಗರಾಜ ಆನ್ವೇರಿ, ರಾಜೇಂದ್ರ ಹಾವೇರಣವರ, ಸಿದ್ದಣ್ಣ ಸಿದ್ದಮ್ಮನವರ, ಹನುಮಂತಗೌಡ ಗಾಜಿಗೌಡ್ರ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಮಠಾಧೀಶರು ಹಾಗೂ ಗಣ್ಯರು ಭಾಗವಹಿಸಿದ್ದರು.  ಗುರುಪೂಜಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.