ಗನ್ ಮ್ಯಾನ್ ವಿಷಯದಲ್ಲಿ ದ್ವೇಷದ ರಾಜಕಾರಣ‌ ಮಾಡುವುದಿಲ್ಲ: ಶ್ರೀರಾಮುಲು

ಕಲಬುರಗಿ,  ಜ 30, ಬಿಜೆಪಿ ಎಂದೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಮಾಜಿ ಸಚಿವ  ಡಿಕೆ ಶಿವಕುಮಾರ್ ಅವರಿಗೆ ಸಚಿವ ಬಿ. ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಮಾಜಿ  ಸಚಿವರಿಗೆ ಸರ್ಕಾರದಿಂದ ಗನ್‌ಮ್ಯಾನ್ ವಾಪಾಸ್ ಪಡೆದು ಬಿಜೆಪಿ ದ್ವೇಷದ ರಾಜಕಾರಣ  ಮಾಡುತ್ತಿದೆ ಎಂಬ ಡಿ. ಕೆ. ಶಿವಕುಮಾರ್ ಹೇಳಿಕೆ‌ ಕುರಿತು ಕಲಬುರಗಿ ವಿಮಾನ ನಿಲ್ದಾಣದಲ್ಲಿ  ಪ್ರತಿಕ್ರಿಯಿಸಿದ ಸಚಿವರು, ಎಲ್ಲರನ್ನೂ ಸಮಾನವಾಗಿ ಕಾಣುವುದು ನಮ್ಮ ಪಕ್ಷದ ಸಿದ್ಧಾಂತ ಎಂದರು. 

ಸಚಿವ ಸಂಪುಟ ವಿಸ್ತರಣೆ ತಿಂಗಳ ಫೆಬ್ರವರಿ ಮೊದಲ ವಾರ ಅಥವಾ ಮಾರ್ಚ್ ಮೊದಲ ವಾರ ಆಗುತ್ತದೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ ಎಂದು ತಿಳಿಸಿದರು. ಇನ್ನು  ಮುಂದೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಇಲ್ಲ ಎಂಬ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ  ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,‌ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ತಾವು ಬದ್ಧ. ರಮೇಶ್ ಜಾರಕಿಹೊಳಿ ಮತ್ತು ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.  ಅವರು ತಮ್ಮ ಸಹೋದರನಿದ್ದಂತೆ ಎಂದರು.

ಅವರು ಮತ್ತು ತಾವು ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿರುವುದರಿಂದ ಈ ರೀತಿ ಆಗಿಲ್ಲ. ಅಲ್ಲದೇ, ಡಿಸಿಎಂ ಹುದ್ದೆ ತಮಗೆ ಬೇಕು‌ ಎಂಬ ಪಟ್ಟು ತಾವು ಹಿಡಿದಿಲ್ಲ ಎಂದರು.ವಾಲ್ಮೀಕಿ ಸಮಾಜದ ಸ್ವಾಮೀಜಿಗಳು ಮತ್ತು ಸಮಾಜದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸುತ್ತಿದ್ದಾರೆ.ಅವರು ಅಭಿಮಾನದಿಂದ ಅಭಿಯಾನ ನಡೆಸುತ್ತಿರಬಹುದು.  ಆದರೆ,‌ ತಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದರು.