ಬೆಂಗಳೂರು, ಏ. 11, ರಾಜ್ಯ ಸರ್ಕಾರ ಕೃಷಿ ಉತ್ಪನ್ನಗಳ ಸುಗಮ ಮಾರಾಟ, ಸಾಗಾಣಿಕೆ ಮತ್ತು ಸೂಕ್ತ ಮಾರುಕಟ್ಟೆ ಒದಗಿಸುವಲ್ಲಿ ಇನ್ನೂ ಕ್ರಿಯಾಶೀಲವಾಗಿಲ್ಲ. ಬರೀ ಚಿಂತನ-ಮಂಥನದಲ್ಲೇ ಕಾಲ ಕಳೆಯುವುದನ್ನು ಬಿಟ್ಟು ತಕ್ಷಣವೇ ರೈತರ ನೆರವಿಗೆ ಧಾವಿಸಬೇಕು ಎಂದು ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.ಕೈಗೆ ಬಂದ ಬೆಳೆಯು ಮಾರಾಟವಾಗದೆ ಮುಂದೇನು? ಎಂದು ಚಿಂತಾಕ್ರಾಂತರಾಗಿರುವ ರೈತರಿಗೆ ಸಹಾಯ ಹಸ್ತಚಾಚಲು ಆಮೆವೇಗದಲ್ಲಿರುವ ಸರ್ಕಾರ ಮುಂಗಾರು ಬೆಳೆಗೆ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕ ಕೊರತೆ ಉಂಟಾಗದಂತೆ ಎಚ್ಚರ ವಹಿಸುತ್ತಿರುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಟ್ವಿಟರ್‌ನಲ್ಲಿ ಲೇವಡಿ ಮಾಡಿದ್ದಾರೆ.
ರಾಜ್ಯಾದ್ಯಂತ ದಾಳಿಂಬೆ, ದ್ರಾಕ್ಷಿ, ಬಾಳೆ, ಕಲ್ಲಂಗಡಿ, ಕರ್ಬುಜ, ಮಾವು ಸೇರಿದಂತೆ ಹೂವು ತರಕಾರಿ ಉತ್ಪನ್ನಗಳನ್ನು ಬೆಳೆದ ರೈತರು ಸಾಗಣೆ, ಮಾರುಕಟ್ಟೆ ಸಿಗದೆ ಅಲ್ಲೇ ಕೊಳೆಸುವ, ಮಾರುಕಟ್ಟೆಯಲ್ಲಿ ಸುರಿದು ಹೋಗುತ್ತಿರುವ ಪ್ರಸಂಗಗಳು ದಿನನಿತ್ಯ ಹೆಚ್ಚಾಗುತ್ತಿವೆ. ಸರ್ಕಾರ 'ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ' ಎನ್ನುವ ಮೂಗಿಗೆ ತುಪ್ಪ ಸವರುವ ಮಾತನಾಡುತ್ತಿದೆಯೇ ಹೊರತು ಕಂಗಾಲಾದ ರೈತರಿಗೆ ಆತ್ಮಸ್ಥೈರ್ಯ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂಬುದಕ್ಕೆ ರಾಜ್ಯದಾದ್ಯಂತ ರೈತರು ಪರಿತಪಿಸುತ್ತಿರುವ ನೂರಾರು ಉದಾಹರಣೆಗಳು ಪುಷ್ಟಿ ನೀಡುತ್ತಿವೆ ರೈತರ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ ಮಾರಾಟ ಮಾಡಲು ತಡಮಾಡದೇ ಕ್ರಮಕೈಗೊಳ್ಳಬೇಕು. ಲಾಕ್ ಡೌನ್ ಮುಂದುವರಿಕೆ ನಿಚ್ಚಳವಾಗಿರುವ ಹಿನ್ನೆಲೆಯಲ್ಲಿ ತುರ್ತು ಕಾರ್ಯೋನ್ಮುಖವಾಗಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಸೀಲ್‌ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆಯೇ? ಮಾಡುವುದಿದ್ದರೆ ಯಾವ್ಯಾವ ಜಿಲ್ಲೆಗಳಿಗೆ ಇದು ಅನ್ವಯ? ಸೀಲ್‌ಡೌನ್ ಅವಧಿಯಲ್ಲಿ ಲಭ್ಯವಿರುವ ವಸ್ತುಗಳು ಯಾವುವು?ಯಾವು ಇರುವುದಿಲ್ಲ ಎಂಬುದರ ಬಗ್ಗೆ ಸರ್ಕಾರ ಕೂಡಲೇ ಅಧಿಕೃತವಾಗಿ ಮಾಹಿತಿ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸೀಲ್‌ಡೌನ್ ಗೆ ಸಂಬಂಧಿಸಿದಂತೆ ಬಗೆಬಗೆಯ ಸುದ್ದಿಗಳು ಹರಿದಾಡುತ್ತಿವೆ. ಜನರಲ್ಲಿ ಭೀತಿ ಆವರಿಸಿದ್ದು, ಸಮೂಹ ಸನ್ನಿಗೆ ಸಿಲುಕಿದ್ದಾರೆ. ಆಹಾರ, ಔಷಧ, ಅಗತ್ಯ ವಸ್ತುಗಳ ಲಭ್ಯತೆ ಬಗ್ಗೆ ಜನರಲ್ಲಿ ಅನುಮಾನಗಳು ಮೂಡಿದ್ದು, ಅವುಗಳ ದಾಸ್ತಾನಿಗೆ ಮುಂದಾಗಿದ್ದಾರೆ. ಇದು ಮತ್ತೊಂದು ಸಮಸ್ಯೆ ಸೃಷ್ಟಿಸುವ ಮುನ್ನ ಸರ್ಕಾರ ಅನುಮಾನಗಳನ್ನು ನೀಗಿಸಬೇಕು.
ಇಲ್ಲವಾದಲ್ಲಿ ಗಾಳಿ ಸುದ್ದಿಗಳು, ಸುಳ್ಳು ಮಾಹಿತಿಗಳು ಜನರ ದಿಕ್ಕು ತಪ್ಪಿಸಲಿವೆ ಎಂದು ಟ್ವೀಟ್ ಮೂಲಕ ಅವರು ಆತಂಕವ್ಯಕ್ತಪಡಿಸಿದ್ದಾರೆ.ಸೀಲ್ ಡೌನ್ ಭೀತಿ ಜನರನ್ನು ಸಮೂಹಸನ್ನಿಗೆ ದೂಡಿರುವಾಗಲೇ, ದಿನಸಿ ಅಂಗಡಿ, ಔಷಧಾಲಯಗಳು ತೆರೆಯಬೇಕೋ ಬೇಡವೋ ಎಂಬ ಅನುಮಾನ ಮಾರಾಟಗಾರರಲ್ಲಿ ಮೂಡಿದೆ. ಹಾಗೇನಾದರೂ ದಿನಸಿ ಅಂಗಡಿಗಳು, ಔಷಧಾಲಯಗಳು ಭೀತಿಯಿಂದ ಮುಚ್ಚಿದರೆ, ಜನರಿಗೆ ಆಹಾರ, ಔಷಧಗಳ ಲಭ್ಯತೆಯಲ್ಲಿ ಸಮಸ್ಯೆ ಸೃಷ್ಟಿಯಾಗಲಿದೆ. ಈ ಬಗ್ಗೆ ಸರ್ಕಾರ ಎಚ್ಚರ ವಹಿಸುವ ತುರ್ತು ಎಚ್ಚರವಹಿಸಬೇಕು ಎಂದು ಸಲಹೆ ನೀಡಿದ್ದಾರೆ.