ಕನಸುಗಳ ಪೂರೈಕೆಗೆ ಪರಿಶ್ರಮ ಅಗತ್ಯ: ಮಲಗೌಡ ಝರೆ

ಕನಸುಗಳ ಪೂರೈಕೆಗೆ ಪರಿಶ್ರಮ ಅಗತ್ಯ: ಮಲಗೌಡ ಝರೆ  Hard work is essential to realize dreams: Malagouda Zhare


ಬಾಗಲಕೋಟೆ 27: ಸಮಾಜ ಸೇವೆ ಮಾಡಲು, ಗುರಿ ಮತ್ತು ಆಸೆಗಳನ್ನು ಪೂರೈಸಿಕೊಳ್ಳಲು ಉನ್ನತ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುವುದು ಅವಶ್ಯವಾಗಿದ್ದು ಅದಕ್ಕೆ ಪೂರಕವಾದ ಅಧ್ಯಯನವನ್ನು ರೂಡಿಸಿಕೊಳ್ಳಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪ ನಿರ್ದೇಶಕರಾದ ಮಲಗೌಡ ಝರೆ ಅವರು ಹೇಳಿದರು  

ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಸಸಿಗೆ ನೀರೆರೆಯುವುದುರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಐಎಎಸ್, ಕೆಎಎಸ್, ಕೆಪಿಎಸ್‌.ಸಿ ಅಂತಹ ಉನ್ನತ ಹುದ್ದೆಗಳ ಅದ್ಯಯನಕ್ಕೆ ಆರ್ಟ್ಸ ವಿಭಾಗ  ಪರಿಣಾಮಕಾರಿಯಾಗಿದ್ದು ನಿರಂತರ ಅಧ್ಯಯನದಲ್ಲಿ ತೊಡಗಬೇಕು ಅಂದಾಗ ಮಾತ್ರ ಉತ್ತಮ ಸ್ಥಾನಕ್ಕೆ ಹೋಗಲು ಸಾಧ್ಯ. ಪ್ರಾಥಮಿಕ ಮತ್ತು ಪಿಯುಸಿಯಲ್ಲಿ ಶಿಸ್ತುಬದ್ಧ ಅದ್ಯಯನ ರೂಡಿಸಿಕೊಂಡರೆ ಸುಲಭವಾಗಿ ಸರಕಾರಿ ಹುದ್ದೆಗಳನ್ನು ಪಡೆದುಕೊಳ್ಳಬಹುದು ಎಂದರು.  

ಶಿಸ್ತುಬದ್ಧ ಅಧ್ಯಯನ ಮಾಡುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಮೊಬೈಲ್ ಮತ್ತು ಸಮಾಜಿಕ ಜಾಲತಾಣಗಳ ಗಳಿಗೆ ಒಳಗಾಗಬೇಡಿ. ಮಹಿಳೆಯರಿಗೆ, ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಮಾಧ್ಯಮ ಅಧ್ಯಯನದ ಅಭ್ಯರ್ಥಿಗಳಿಗೆ ಮೀಸಲಾತಿಗಳಿದ್ದು ಅವುಗಳನ್ನು ಸದುಪಯೋಗ ಪಡಿಸಿ ಕೊಳ್ಳಬೇಕು.

ಐಎಎಸ್, ಕೆಎಎಸ್ ಆಕಾಂಕ್ಷಿಗಳಿಗೆ ಸರಕಾರ ಉಚಿತ ತರಬೇತಿ ಮತ್ತು ಪ್ರೊತ್ಸಾಹಧನ ನೀಡುತ್ತವೆ ಅವುಗಳ ಉಪಯೋಗ ಪಡೆದುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡ ಮಾಧ್ಯಮದಲ್ಲಿಯೇ ನಡೆಯುತ್ತಿದ್ದು ಮಾತೃಭಾಷೆಯಲ್ಲಿಯೇ ಅಧ್ಯಯನ ಮಾಡಿ. ಶುದ್ಧ ಬರಹ ರೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.  

ಪ್ರಾಚಾರ್ಯ ಎಸ್‌.ಆರ್ ಮೂಗನೂರಮಠ ಅವರು ಮಾತನಾಡಿ ಅಂಕಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯ. ಅವುಗಳು ಜೀವನವನ್ನು ಕಟ್ಟಿಕೊಡುವ ಕೆಲಸ ಮಾಡುತ್ತವೆ. ಪಠ್ಯದ ಜೊತೆಗೆ ಕ್ರೀಡೆಯಿಂದ ಆರೋಗ್ಯ, ಸಾಂಸ್ಕೃತಿಕ ಚಟುವಟಿಕೆಗಳಿಂದ ಆತ್ಮವಿಶ್ವಾಸ, ಎನ್‌.ಸಿ.ಸಿಯಿಂದ ಶಿಸ್ತು, ಎನ್‌.ಎಸ್‌.ಎಸ್ ಇಂದ ಸಾಮಾಜಿಕ ಪ್ರಜ್ಞೆ ಬೆಳೆಯುತ್ತದೆ.

ಎಲ್ಲ ವಿದ್ಯಾರ್ಥಿಗಳು ಪರಿಶ್ರಮದ ಅಧ್ಯಯನದ ಜೊತೆಗೆ ಇವುಗಳಲ್ಲಿ ಪಾಲ್ಗೊಳಬೇಕು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಅವರ ಪಾಲಕರು ಬೆಂಬಲ ನೀಡಬೇಕು ಎಂದರು.  

ಸಾಂಸ್ಕೃತಿಕ ಚಟುವಟಿಕೆಗಳ ಸಮಿತಿಯ ಸಂಯೋಜಕರಾದ ಡಾ.ಕೆ.ವಿ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಡಾ.ಎ.ಯು ರಾಠೋಡ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಂ.ದೇವನಾಳ, ವಿದ್ಯಾರ್ಥಿ ಪ್ರತಿನಿಧಿಗಳಾದ ಅಯ್ಯಪ್ಪಯ್ಯ ಹಳ್ಳೂರ, ಯಮನವ್ವ ಆನೆಗುಂದಿ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.