ಹನುಮಾನ್ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಬೊಮ್ಮಾಯಿ ಆಗ್ರಹ
Hanuman temple urinating case: Bommai demands strict action against culprits
ಶಿಗ್ಗಾವಿ, ಆ.23: ಪಟ್ಟಣದ ಹನುಮಾನ್ ದೇವಸ್ಥಾನದಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಖಂಡನೀಯವಾಗಿದ್ದು, ತಪ್ಪಿತಸ್ಥನ ವಿರುದ್ಧ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಪಟ್ಟಣದ ಟ್ಯಾಕ್ಸಿ ಸ್ಟ್ಯಾಂಡ್ನಲ್ಲಿರುವ ಶ್ರೀ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ, ಘಟನೆಯ ಕುರಿತು ಪರೀಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದಿರುವುದು ಅತ್ಯಂತ ಹೇಯ ಕೃತ್ಯ. ಇಂತಹ ಕೃತ್ಯವನ್ನು ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ ಎಂದರು.
ಹನುಮಾನ್ ದೇವಸ್ಥಾನಕ್ಕೆ ಗೇಟ್ ಇದ್ದು, ಒಳಗೆ ಪ್ರವೇಶಿಸಿ ಉದ್ದೇಶಪೂರ್ವಕವಾಗಿ ಮೂತ್ರ ವಿಸರ್ಜನೆ ಮಾಡಲಾಗಿದೆ. ಘಟನೆ ಆಕಸ್ಮಿಕವಾಗಿ ನಡೆದಿರುವ ಸಾಧ್ಯತೆ ಇಲ್ಲ. ಈ ಬಗ್ಗೆ ಪೊಲೀಸರು ಗಂಭೀರ ತನಿಖೆ ನಡೆಸಿ, ತಪ್ಪಿತಸ್ಥನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಘಟನೆಗೆ ಸಂಬಂಧಿಸಿದಂತೆ ಪ್ರಮೋದ್ ಮುತಾಲಿಕ್ ಅವರಿಗೆ ಕರೆ ನೀಡಿದ್ದು, ಅವರಿಗೆ ತಮ್ಮ ಬೆಂಬಲವಿದೆ ಎಂದು ಬೊಮ್ಮಾಯಿ ಹೇಳಿದರು. “ಯಾವುದೇ ಕೋಮಿನ ವಿರುದ್ಧವಾಗಲಿ, ಯಾವುದೇ ಹಬ್ಬದ ವಿರುದ್ಧವಾಗಲಿ ನಮ್ಮ ಬಂದ್ ಇಲ್ಲ. ವ್ಯಾಪಾರಸ್ಥರು ಸ್ವಯಂಪ್ರೇರಣೆಯಿಂದ ಬಂದ್ಗೆ ಬೆಂಬಲ ನೀಡಬೇಕು.
ಯಾರ ಮೇಲೂ ಒತ್ತಡ ಹೇರಿ ಬಂದ್ ಮಾಡಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಹಿಂಸಾಚಾರ ಅಥವಾ ಕೋಮು ಗಲಭೆಗೆ ಅವಕಾಶ ನೀಡಬಾರದು. ಶಿಗ್ಗಾವಿ ಬಂದ್ಗೆ ಎಲ್ಲ ಕೋಮಿನವರೂ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.
ದೇವಸ್ಥಾನಕ್ಕೆ ಅನುದಾನ ನೀಡುವಂತೆ ಮನವಿ
ಘಟನೆ ನಡೆದ ದಿನ ಯಾವುದೇ ಪ್ರಮುಖ ನಾಯಕರು ಅಥವಾ ಕಾರ್ಯಕರ್ತರು ಸ್ಥಳಕ್ಕೆ ಬಂದಿರಲಿಲ್ಲ. ಆದರೆ ಇಂದು ಸಂಸದ ಬಸವರಾಜ ಬೊಮ್ಮಾಯಿ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಎಲ್ಲರೂ ಫೋಟೋಗೆ ಪೋಸ್ ನೀಡಲು ಬಂದಿದ್ದಾರೆ ಎಂಬ ಆರೋಪವೂ ಕೇಳಿಬಂದಿತು.
ನ್ಯಾಯ ಒದಗಿಸುವುದರ ಜೊತೆಗೆ ಹನುಮಾನ್ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಒದಗಿಸಬೇಕು. ಶಿಗ್ಗಾವಿ ಪಟ್ಟಣ ಬಂದ್ ಕುರಿತು ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೇವಸ್ಥಾನ ಸಮಿತಿ ಸದಸ್ಯರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಮಾಯಗೇರಿ, ಶಿಗ್ಗಾವಿ ಅಧ್ಯಕ್ಷ ವಿಶ್ವನಾಥ ಹರವಿ, ಮುಖಂಡರಾದ ಶಿವಪ್ರಸಾದ ಸುರಗೀಮಠ, ಶ್ರೀಕಾಂತ ಬುಳ್ಳಕ್ಕನವರ, ನರಹರಿ ಕಟ್ಟಿ, ರಮೇಶ ವನಹಳ್ಳಿ, ದಯಾನಂದ ಅಕ್ಕಿ, ಮಂಜುನಾಥ ಬ್ಯಾಹಟ್ಟಿ, ಸಂಜನಾ ರಾಯ್ಕರ್, ಮಾಲತೇಶ ಯಲಿಗಾರ ಸೇರಿದಂತೆ ಹನುಮಾನ್ ದೇವಸ್ಥಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 