ಇಸ್ಲಾಮಾಬಾದ್, ಡಿ 11 : ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸಿದ ಆರೋಪದ ಮೇಲೆ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ಹಾಗೂ ಜಮಾತ್-ಉದ್-ದುವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಲಾಹೋರ್ನ ಭಯೋತ್ಪಾದಕ ನಿಗ್ರಹ ನ್ಯಾಯಾಲಯ ಬುಧವಾರ ದೋಷಾರೋಪ ಹೊರಿಸಿದೆ.
ಭಯೋತ್ಪಾದಕ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಹರ್ಷದ್ ಭುಟ್ಟಾ ಅವರು ಹಫೀಜ್ ಸಯೀದ್ ಮತ್ತು ಇತರ ನಾಲ್ವರು ಜೆಯುಡಿ ನಾಯಕರ ವಿರುದ್ಧ ದೋಷಾರೋಪಣೆ ಹೊರಿಸಿದ್ದಾರೆ. ಭಯೋತ್ಪಾದಕರಿಗೆ ಹಣಕಾಸು ನೆರವು ಒದಗಿಸಿರುವುದಕ್ಕೆ ಸಂಬಂಧಿಸಿ ಕಳೆದ ಜುಲೈನಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ವಿಚಾರಣೆ ಬಳಿಕ ನ್ಯಾಯಾಧೀಶ ಭುಟ್ಟಾ ಅವರು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು.
ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸಿದ ಆರೋಪದ ಮೇಲೆ ಜುಲೈ 17ರಂದು ಪಂಜಾಬ್ ಪೊಲೀಸ್ನ ಭಯೋತ್ಪಾದನೆ ನಿಗ್ರಹ ಇಲಾಖೆ(ಸಿಟಿಡಿ) ಹಫೀಜ್ ಸಯೀದ್ ಮತ್ತು ಆತನ ಸಹಚರರ ವಿರುದ್ಧ 23 ಎಫ್ಐಆರ್ಗಳನ್ನು ದಾಖಲಿಸಿ, ಸಯೀದ್ನನ್ನು ಬಂಧಿಸಿತ್ತು.
ಭಯೋತ್ಪಾದನೆಗೆ ಹಣಕಾಸು ನೆರವು ಕುರಿತು ಸಿಟಿಡಿ ದಾಖಲಿಸಿದ ಪ್ರಕರಣದಲ್ಲಿ ಒಬ್ಬ ಶಂಕಿತ ಲಭ್ಯವಿಲ್ಲದ ಕಾರಣ ಶನಿವಾರ ದೋಷಾರೋಪ ಹೊರಿಸುವುದಕ್ಕೆ ವಿಳಂಬವಾಗಿತ್ತು.