ಬೆಂಗಳೂರು, ನ 4: ರಾಜ್ಯ ರಾಜಕಾರಣದಲ್ಲಿ ಮೈತ್ರಿ ಸರ್ಕಾರದ ಪತನ ವಿಚಾರ ಗಂಭೀರತೆ ಪಡೆಯುತ್ತಿದ್ದು, ಮೈತ್ರಿ ಸರ್ಕಾರ ಪತನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನೇ ಕಾರಣರನ್ನಾಗಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಂತ್ರರೂಪಿಸುತ್ತಿರುವ ಸಂದರ್ಭದಲ್ಲಿಯೇ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಲಂಡನ್ ಪ್ರವಾಸಕ್ಕೆ ತೆರಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಖೆಡ್ಡಾಕ್ಕೆ ಕೆಡವಲು ಯಡಿಯೂರಪ್ಪ ಜೊತೆ ಕುಮಾರಸ್ವಾಮಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಮುನ್ನಲೆಗೆ ಬರುತ್ತಿದ್ದು, ಇಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ವಿದೇಶಕ್ಕೆ ಹಾರಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಪುತ್ರ ನಿಖಿಲ್ ಸಿನಿಮಾ ವಿಚಾರವಾಗಿ ನಾಲ್ಕು ದಿನಗಳ ಕಾಲ ಪತ್ನಿ ಅನಿತಾ ಜೊತೆಯಾಗಿ ಲಂಡನ್ ಗೆ ತೆರಳಿದ್ದು, ನ.8 ರಂದು ಅವರು ಬೆಂಗಳೂರಿಗೆ ವಾಪಸಾಗಲಿದ್ದಾರೆ. ವಿದೇಶ ಪ್ರವಾಸ ಪುತ್ರನ ಸಿನಿಮಾಕ್ಕೆ ಸಂಬಂಧಿಸಿದ್ದು ಎಂದು ಮೇಲ್ನೋಟಕ್ಕೆ ಕಂಡುಬಂದರೂ ಸಹ ಒಳಗಿನ ವಿಷಯ ಬೇರೆಯೇ ಇದೆ ಎನ್ನಲಾಗಿದೆ. ಮತ್ತೊಂದೆಡೆ ಜೆಡಿಎಸ್ ನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಮೇಲ್ಮನೆ ಸದಸ್ಯರು ಹಾಗೂ ಕೆಲವು ಶಾಸಕರು ತಾವು ಶಾಸಕಾಂಗ ಪಕಷದ ನಾಯಕನಾಗಿರುವುದರ ವಿರುದ್ಧ ಅಪಸ್ವರ ಎತ್ತಿದ್ದಾರೆ. ಭಿನ್ನಮತ ಸರಿದೂಗಿಸಲು ವರಿಷ್ಠ ಎಚ್.ಡಿ.ದೇವೇಗೌಡ ಸಭೆ ಮೇಲೆ ಸಭೆ ನಡೆಸಿ ಪರಿಹಾರ ಹುಡುಕಲೆತ್ನಿಸಿದ್ದಾರೆ. ಕುಮಾರಸ್ವಾಮಿ ಮತ್ತು ರೇವಣ್ಣ ಸಮ್ಮುಖದಲ್ಲಿ ಮೇಲ್ಮನೆ ಸದಸ್ಯರೊಂದಿಗೆ ಸಭೆ ನ. 6ಕ್ಕೆ ನಿಗದಿಯಾಗಿತ್ತು. ಇದೀಗ ಹೆಚ್.ಡಿ.ಕುಮಾರಸ್ವಾಮಿ ವಿದೇಶಕ್ಕೆ ತೆರಳಿರುವುದರಿಂದ ಈ ಸಭೆ ರದ್ದಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.