ಜೀವ ಬೆದರಿಕೆ ಇದೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಆಧಾರರಹಿತ: ಡಾ.ಸಿ.ಎನ್.ಅಶ್ವಥ್ ನಾರಾಯಣ್

ಬೆಂಗಳೂರು, ಜ.25 ,ಬಿಜೆಪಿ ಕಡೆಯಿಂದ ತಮಗೆ ಜೀವ ಬೆದರಿಕೆ ಇದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಆಧಾರ ರಹಿತ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದ್ದಾರೆ. 

ಬೆಂಗಳೂರಿನ ಬಿಜೆಪಿ ಕೇಂದ್ರ ಕಾರ್ಯಾಲಯದಲ್ಲಿ ಶನಿವಾರ ಕಾರ್ಯಕರ್ತರನ್ನು ಭೇಟಿಯಾಗಿ ನಂತರ, ಸಾರ್ವಜನಿಕರು ಮತ್ತು ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಡೆಯಿಂದ ತಮಗೆ ಜೀವ ಬೆದರಿಕೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂತಹ ಬೆದರಿಕೆ ಬಂದಿದ್ದರೆ ಕುಮಾರಸ್ವಾಮಿಯವರು ಪೊಲೀಸ ಇಲಾಖೆಗೆ ತಿಳಿಸಬಹುದಿತ್ತು. ಅದರಂತೆ ಇಲಾಖೆ ಕ್ರಮ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿತ್ತು.  ಬಿಜೆಪಿ ಕಡೆಯ ಯಾವ ವ್ಯಕ್ತಿ ಮತ್ತು ಯಾವ ರೀತಿ ಬೆದರಿಕೆ ಬಂದಿದೆ ಎಂದು ಕುಮಾರಸ್ವಾಮಿ ಹೇಳಿಲ್ಲ. ಬಿಜೆಪಿಯನ್ನು ಗುರಿಯಾಗಿಸಿಕೊಂಡು ಈ ರೀತಿ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಬಿಜೆಪಿ ಎಂದಿಗೂ ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ. ಅದೇನಿದ್ದರೂ ಇತರ ಕೆಲ ಪಕ್ಷಗಳು ಇಂತಹ ಕೆಲಸವನ್ನು ಮಾಡುತ್ತವೆ ಎಂದು ಹೇಳಿದ್ದಾರೆ. 

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಸಹ ಕುಮಾರಸ್ವಾಮಿ ಅವರ ರೀತಿ ಹೇಳಿಕೆ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಡಿ.ಕೆ.ಶಿವಕುಮಾರ್ ಅವರಂತಹ ಹಿರಿಯ ಮತ್ತು ಅನುಭವಿ ರಾಜಕೀಯ ವ್ಯಕ್ತಿಗಳು ಸಮಾಜ ಕಟ್ಟುವುದನ್ನು ಬಿಟ್ಟು, ಜಾತಿಯ ಮೇಲೆ ಜಾತಿಯನ್ನು ಎತ್ತಿಕಟ್ಟಿ, ಜಾತಿಗಳ ಮಧ್ಯೆ ವೈಮನಸ್ಯ ಮೂಡಿಸಲು ಹೊರಟಿರುವುದು ನಿಜಕ್ಕೂ ದುರಂತ. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್  ಅವರ ರಾಜಕೀಯ ಪ್ರೇರಿತ ಮತ್ತು ದಿಕ್ಕುತಪ್ಪಿಸುವ ಹೇಳಿಕೆಯನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು  ಅವರು ಹೇಳಿದರು. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರಮಾಧಿಕಾರ ಎಂದು ಡಾ.ಸಿ.ಎನ್.ಅಶ್ವಥ್ ನಾರಾಯಣ್ ಇದೇ ಸಂದರ್ಭದಲ್ಲಿ ಹೇಳಿದರು.