ಗುರು ವಂದನಾ ಕಾರ್ಯಕ್ರಮ ಭಕ್ತಿ, ಶ್ರದ್ಧೆಯಿಂದ ನೆರವೇರಿಕೆ

ಗುರು ವಂದನಾ ಕಾರ್ಯಕ್ರಮ ಭಕ್ತಿ, ಶ್ರದ್ಧೆಯಿಂದ ನೆರವೇರಿಕೆ  Guru Vandana program conducted with devotion and reverence

ಹುಬ್ಬಳ್ಳಿ 31: ಗುರು ಪೂರ್ಣಿಮೆಯ ಅಂಗವಾಗಿ ಹುಬ್ಬಳ್ಳಿಯ ಬೃಹತ್ ಹೊಸಮಠದಲ್ಲಿ ಶ್ರೀಮನ್ ಮಹಾರಾಜ್ ನಿರಂಜನ ಜಗದ್ಗುರು ಡಾ. ಪರಮಪೂಜ್ಯ ಚಂದ್ರಶೇಖರ ಶಿವಯೋಗಿ ರಾಜಯೋಗೇಂದ್ರ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ಗುರು ವಂದನಾ ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಯಶಸ್ವಿಯಾಗಿ ಜರುಗಿತು.  

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಜಗದ್ಗುರು ಶ್ರೀಗಳು, ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಗೆ ಅತ್ಯುನ್ನತ ಸ್ಥಾನವಿದೆ. ಗುರು ಕೇವಲ ಶಿಕ್ಷಣ ನೀಡುವವರಲ್ಲ, ಜೀವನದ ಸನ್ಮಾರ್ಗವನ್ನು ತೋರಿಸುವ ದಾರೀದೀಪವಾಗಿದ್ದಾರೆ. ಗುರುಗಳ ಮಾರ್ಗದರ್ಶನವನ್ನು ಅನುಸರಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಗುರುಮಂತ್ರಗಳ ಮಹತ್ವವನ್ನು ವಿವರಿಸಿದ ಶ್ರೀಗಳು, ಗುರುಗಳ ಕೃಪೆಯಿಂದ ಅಜ್ಞಾನದ ಅಂಧಕಾರ ದೂರವಾಗಿ ಜ್ಞಾನದ ಬೆಳಕು ದೊರೆಯುತ್ತದೆ ಎಂದು ಆಶೀರ್ವಚನ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗನಗೌಡ ಹೂವಣ್ಣವರ ಅವರ ಸಾಮಾಜಿಕ ಸೇವೆ, ಸಂಘಟನಾ ಸಾಮರ್ಥ್ಯ ಹಾಗೂ ಸಮಾಜಮುಖಿ ಕಾರ್ಯಗಳನ್ನು ಜಗದ್ಗುರು ಶ್ರೀಗಳು ಪ್ರಶಂಸಿಸಿದರು.  

ಸಂಗನಗೌಡ ಹೂವಣ್ಣವರ ಮಾತನಾಡಿ, ಭಾರತೀಯ ಗುರು-ಶಿಷ್ಯ ಪರಂಪರೆ ಕೃತಯುಗ, ತ್ರೇತಾಯುಗ ಹಾಗೂ ದ್ವಾಪರಯುಗಗಳಿಂದಲೂ ಸಮಾಜಕ್ಕೆ ಜ್ಞಾನ, ಸಂಸ್ಕಾರ ಮತ್ತು ಮೌಲ್ಯಗಳನ್ನು ನೀಡುತ್ತಾ ಬಂದಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ, ನೈತಿಕತೆ ಹಾಗೂ ಹಿರಿಯರ ಬಗ್ಗೆ ಗೌರವ ಬೆಳೆಸುವಲ್ಲಿ ಗುರುಗಳ ಪಾತ್ರ ಮಹತ್ವದ್ದಾಗಿದೆ ಎಂದರು.  

ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಅವರು, ಗುರುಗಳ ಮಾರ್ಗದರ್ಶನವನ್ನು ಅನುಸರಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಗುರು ತೋರಿದ ಸನ್ಮಾರ್ಗವೇ ಜೀವನದ ನಿಜವಾದ ದಾರಿ ಎಂದು ಹೇಳಿದರು.  ಕಾರ್ಯಕ್ರಮವನ್ನು ನಿಂಗಪ್ಪ ಜಕ್ಕಲಿ ಉದ್ಘಾಟಿಸಿದರು. ಜಗದ್ಗುರು ಶ್ರೀಗಳ ಆಧ್ಯಾತ್ಮಿಕ ಸೇವೆ, ಧಾರ್ಮಿಕ ಚಿಂತನೆ ಹಾಗೂ ಸಮಾಜಮುಖಿ ಕಾರ್ಯಗಳ ಕುರಿತು ಅವರು ಮಾತನಾಡಿದರು.  

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಭೀಮಸೇನ ನಾಯಕ್ ಅವರು ಭಗವಾನ್ ಬುದ್ಧ, ಜಗಜ್ಯೋತಿ ಬಸವಣ್ಣ ಹಾಗೂ ಭಾರತರತ್ನ ಡಾ. ಬಿ.ಆರ್‌. ಅಂಬೇಡ್ಕರ್ ಅವರ ತತ್ವ, ಆದರ್ಶ ಮತ್ತು ಸಮಾನತೆಯ ಸಂದೇಶಗಳನ್ನು ವಿವರಿಸಿದರು. ಜಾತಿ-ಧರ್ಮದ ಭೇದವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಬಸವರಾಜ ಕಾಂತಿ, ನಾಗೇಶ್, ಚಂದು, ಗೋಪಿ, ಪ್ರದೀಪ್, ಹಿಂದೂ ಮಹಾಸಭಾ ಸಂಘಟಕರು, ದ್ರಾಕ್ಷಾಯಿಣಿ, ಈರಮ್ಮನಿ, ಗೌರವಮ್ಮ ನಾಯಕ್, ಶಂಕ್ರ​‍್ಪ ಮಡಿವಾಳ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.  

ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜಗದ್ಗುರು ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಅನ್ನಪ್ರಸಾದ (ಮಹಾಪ್ರಸಾದ) ಸ್ವೀಕರಿಸಿದರು. ಗುರುಭಕ್ತಿ, ಭಾರತೀಯ ಸಂಸ್ಕೃತಿ ಹಾಗೂ ಗುರು-ಶಿಷ್ಯ ಪರಂಪರೆಯ ಮಹತ್ವ ಸಾರಿದ ಈ ಕಾರ್ಯಕ್ರಮ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.