ಶಂಕರಲಿಂಗ ಮಾಡೆಲ್ ಸ್ಕೂಲನಲ್ಲಿ ಗುರುವಂದನೆ

ಶಂಕರಲಿಂಗ ಮಾಡೆಲ್ ಸ್ಕೂಲನಲ್ಲಿ ಗುರುವಂದನೆ  Guru Vandana at Shankaralinga Model School

ಶಂಕರಲಿಂಗ ಮಾಡೆಲ್ ಸ್ಕೂಲನಲ್ಲಿ ಗುರುವಂದನೆ  

ಯಮಕನಮರಡಿ 13: ಶಂಕರಲಿಂಗ ಮಾಡೆಲ್ ಸ್ಕೂಲ್ ಚಿಕಾಲಗುಡ್ಡ ಇಲ್ಲಿನ ಸಭಾಗೃಹದಲ್ಲಿ ಗುರುಪೂರ್ಣಿಮೆಯ ಕಾರ್ಯಕ್ರಮವನ್ನು ಬುಧವಾರ ದಿ. 9ರಂದು ವಿಜೃಂಭಣೆಯಿಂದ ನಡೆಸಲಾಯಿತು. 

ಮುಖ್ಯ ಅತಿಥಿಗಳಾಗಿ ಜಗದ್ಗುರು ಅಭಿನವ ವಿದ್ಯಾ ನರಸಿಂಹಭಾರತೀ ಶಂಕರಾಚಾರ್ಯ, ಸಂಕೇಶ್ವರಪೀಠ ಮಹಾಸಂಸ್ಥಾನ ಕರವೀರ ಶ್ರೀಗಳು ಆಗಮಿಸಿದ್ದರು. ವಿದ್ಯಾರ್ಥಿಗಳು ಶ್ರೀಗಳು ಬರುವ ದಾರಿಗೆ ಹೂವಿನ ಮಳೆಗರೆವ ಮೂಲಕ ಅವರನ್ನು ಸ್ವಾಗತಿಸಿದರು. ಸಂಸ್ಥೆಯ  ಸಂಸ್ಥಾಪಕರೂ, ಅಧ್ಯಕ್ಷರೂ ಆದ ಬಾಲಕೃಷ್ಣ ಹತನೂರಿ ದಂಪತಿಗಳು ಶ್ರೀಗಳ ಪಾದಪೂಜೆಯನ್ನು ನೆರವೇರಿಸಿದರು. ಸಂಸ್ಥೆಯ ಆಡಳಿತ ಮಂಡಳಿಯ ಶ್ರೀಧರ್ ಹತನೂರಿ ದಂಪತಿಗಳು ತಮ್ಮ ತಂದೆ ತಾಯಿಯ ಪಾದಪೂಜೆಯನ್ನು ನಿರ್ವಹಿಸಿದರು. ವಿದ್ಯಾರ್ಥಿಗಳೆಲ್ಲರೂ ಎಲ್ಲ ಗುರುಗಳ ಪಾದ ಪೂಜೆಯನ್ನು ನೆರವೇರಿಸಿದರು.  

ವಿದ್ಯಾರ್ಥಿನಿ ನೇಹಾ ಅಕ್ಕತಂಗೇರಹಾಳ ಗುರುವಿನ ಮಹತ್ವ ಎಂಬ ವಿಷಯದ ಬಗ್ಗೆ ಭಾಷಣವನ್ನು ಮಾಡಿದಳು. ಹಾಗೆಯೇ ಶಾಲೆಯ ಸಮೂಹ ಗಾನ ವೃಂದವು ಗುರುವಿನ ಮಹಿಮೆಯ ಕುರಿತು ಹಾಡನ್ನು ಹೇಳಿದರು. ಆಡಳಿತ ಮಂಡಳಿಯ ಸರ್ವ ಸದಸ್ಯರು, ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  

ಶಾಲೆಯ ಮುಖ್ಯೋಪಾಧ್ಯಾಯ ಪಿ ಪಿ ಖವರೆಯವರು ನಮ್ಮ ಶಾಲೆಗೆ ಶ್ರೀಗಳ ಪಾದಸ್ಪರ್ಶವಾಗಿದ್ದು ನಮ್ಮೆಲ್ಲರ ಪುಣ್ಯವೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶ್ರೀಗಳು ತಮ್ಮ ಆಶೀರ್ವಚನದಲ್ಲಿ ವಿದ್ಯಾರ್ಥಿಗಳೆಲ್ಲ ಸಂಸ್ಕಾರವಂತರಾಗಲಿ, ಅವರ ಭವಿಷ್ಯವು ಉಜ್ವಲವಾಗಲಿ, ಭಾರತ ತುಂಬೆಲ್ಲ ಅವರ ಕೀರ್ತಿ ಹರಡಲಿ, ಶಂಕರ್ ಲಿಂಗ ಶಾಲೆಯು ಇನ್ನಷ್ಟು ಉತ್ತುಂಗ ಸ್ಥಾನವನ್ನು ಏರಿ ಪ್ರಸಿದ್ಧಿಗೊಳ್ಳಲೆಂದು ಹರಸಿದರು. 

ಕಾರ್ಯಕ್ರಮದ ಸ್ವಾಗತ ಮತ್ತು ಅತಿಥಿಗಳ ಪರಿಚಯವನ್ನು ವಿಕ್ರಾಂತ್ ಪೋತದಾರ್ ಅವರು ನಿರ್ವಹಿಸಿದರು. ನಿರೂಪಣೆ ಗುರುಮಾತೆ ಮಲಪ್ರಭಾ  ದೇಮಣ್ಣವರ್ ನಿರ್ವಹಿಸಿದರು. ವಿದ್ಯಾರ್ಥಿನಿ ವೈಷ್ಣವಿ ಲಿಂಬಣ್ಣವರ್ ವಂದಿಸಿದಳು.