ಗುರುವಂದನೆ ಕಾರ್ಯಕ್ರಮ: ಹಳೆಯ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಸನ್ಮಾನ

ಗುರುವಂದನೆ ಕಾರ್ಯಕ್ರಮ: ಹಳೆಯ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಸನ್ಮಾನ  Guru Vandana Programme: Teachers Honoured by Alumni

ಬ್ಯಾಡಗಿ, 14: ಪಟ್ಟಣದ ಬಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಗುರುಪೂರ್ಣಿಮೆಯ ಅಂಗವಾಗಿ 2003 ಹಾಗೂ 2004ನೇ ಸಾಲಿನ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಂದ ತಮ್ಮ ಗುರುಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.  

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿ, ಅವರಿಂದ ಪಡೆದ ಶಿಕ್ಷಣ ಹಾಗೂ ಮಾರ್ಗದರ್ಶನವನ್ನು ಸ್ಮರಿಸಿದರು. ಶಿಕ್ಷಕರು ಕೂಡ ತಮ್ಮ ಶಿಷ್ಯರಿಂದ ದೊರೆತ ಗೌರವಕ್ಕೆ ಸಂತಸ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ಸಮಾಜ ಸೇವಕ ಮೋಹನಕುಮಾರ ಹುಲ್ಲತ್ತಿ ಮಾತನಾಡಿ, “ಗುರುವಿನ ಸ್ಥಾನ ಅತ್ಯಂತ ಪವಿತ್ರವಾದುದು. ದೇವರು ಮತ್ತು ಗುರು ಎದುರು ನಿಂತರೆ ಮೊದಲು ಗುರುವಿಗೆ ನಮಿಸುತ್ತೇನೆ ಎಂದು ಕಬೀರದಾಸರು ಹೇಳಿದ್ದಾರೆ. ಇದು ಗುರುವಿನ ಮಹತ್ವವನ್ನು ಸಾರುತ್ತದೆ” ಎಂದರು.  

“ಗುರುಗಳು ತಮ್ಮ ಜ್ಞಾನ ಮತ್ತು ಅನುಭವದ ಮೂಲಕ ಶಿಷ್ಯರ ಬದುಕನ್ನು ರೂಪಿಸುತ್ತಾರೆ. ಜೀವನದಲ್ಲಿ ಯಾವುದು ಒಳಿತು, ಯಾವುದು ಕೆಡುಕು ಎಂಬುದನ್ನು ತಿಳಿಸಿ, ಉತ್ತಮ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತಾರೆ. ಗುರುಗಳು ನೀಡಿದ ವಿದ್ಯೆಯಿಂದಲೇ ನಾವು ಸಮಾಜದಲ್ಲಿ ಉತ್ತಮವಾಗಿ ಬದುಕಲು ಸಾಧ್ಯವಾಗಿದೆ. ಇಂತಹ ಮಹನೀಯರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ” ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಎನ್‌.ಸಿ. ಉಮಾಪತಿ, ಸಿ.ಎಚ್‌. ಹಿರೇಮಠ, ಮಾಲತೇಶ ಛತ್ರದ, ಮಲ್ಲೇಶ ಒಡೆಯನಪುರ, ಪವಾರ್ ಟೀಚರ್, ಸುಮತಿ ಮೇಡಂ ಹಾಗೂ ಹಳೆಯ ವಿದ್ಯಾರ್ಥಿಗಳಾದ ಪ್ರವೀಣ್ ಆಲದಗೇರಿ, ರಾಜೇಶ್ ಮೂಲಿಮನಿ, ಮಲ್ಲಿಕಾರ್ಜುನ ಕುದುರಿಹಾಳಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.