ಮೆಕ್ಸಿಕೋ ಸಿಟಿ, ಅ.16: ಮೆಕ್ಸಿಕೊದ ದಕ್ಷಿಣ ರಾಜ್ಯವಾದ ಗೆರೆರೋ ಎಂಬಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 14 ನಾಗರಿಕರು ಮತ್ತು ಒಬ್ಬ ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸಾರ್ವಜನಿಕ ಭದ್ರತಾ ಅಧಿಕಾರಿಗಳು ಘೋಷಿಸಿದ್ದಾರೆ.
"ಇಗುವಾಲಾದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಟೆಪೊಚಿಕಾ ಸಮುದಾಯದಲ್ಲಿ ಸಶಸ್ತ್ರಧಾರಿ ಗುಂಪು ಇರುವ ಬಗ್ಗೆ 911 ಕ್ಕೆ ಕರೆ ಬಂತು, ಈ ಪ್ರದೇಶಕ್ಕೆ ಭದ್ರತಾ ಸಿಬ್ಬಂದಿಯನ್ನು ಕಳುಹಿಸಲಾಯಿತು. ಭದ್ರತಾ ಪಡೆ ಅಲ್ಲಿಗೆ ತೆರಳಿದಾಗ ಸಶಸ್ತ್ರ ನಾಗರಿಕರು ಗುಂಡಿನ ದಾಳಿಯನ್ನು ಪ್ರಾರಂಭಿಸಿದರು. ಪರಿಣಾಮ ಮಿಲಿಟರಿ ಸಿಬ್ಬಂದಿ ಮತ್ತು 14 ಸಶಸ್ತ್ರ ನಾಗರಿಕರು ಸಾವನ್ನಪ್ಪಿದರು ಎಂದು ಗೆರೆರೋ ರಾಜ್ಯ ಭದ್ರತಾ ಅಧಿಕಾರಿಗಳ ವಕ್ತಾರ ರಾಬಟರ್ೊ ಅಲ್ವಾರೆಜ್ ಹೆರೆಡಿಯಾ ಮಂಗಳವಾರ ತಡರಾತ್ರಿ ಟ್ವೀಟ್ ಮಾಡಿದ್ದಾರೆ.
ಮೆಕ್ಸಿಕೊದ ಗೆರೆರೋ ರಾಜ್ಯವು 2014ರಲ್ಲಿ 43 ವಿದ್ಯಾರ್ಥಿಗಳು ಕಣ್ಮರೆಯಾದಾಗ ದೇಶದ ಗಮನ ಸೆಳೆದಿತ್ತು. ಇಗುವಾಲಾ ನಗರದಲ್ಲಿ ತಾರತಮ್ಯದ ನೇಮಕ ಮತ್ತು ಧನಸಹಾಯ ಪದ್ಧತಿಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಅವರನ್ನು ಅಪಹರಿಸಲಾಗಿತ್ತು ಎಂದು ಸ್ಪುಟ್ನಿಕ್ ವರದಿ ಮಾಡಿದೆ.
ಆರಂಭದಲ್ಲಿ, ಸ್ಥಳೀಯ ಡ್ರಗ್ ದಂಧೆಕೋರರು ಮತ್ತು ಕ್ರಿಮಿನಲ್ ತಂಡಗಳು ಅಪಹರಿಸಿರಬಹುದು ಎಂದು ಅಧಿಕಾರಿಗಳು ಆರೋಪಿಸಿದ್ದರು, ಆದರೆ ನಂತರ, ಸ್ಥಳೀಯ ಪೊಲೀಸರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಸ್ವತಂತ್ರ ತಜ್ಞರು ಒದಗಿಸಿದ ಹೆಚ್ಚುವರಿ ಸಾಕ್ಷ್ಯಗಳಿಂದ ತಿಳಿದುಬಂದಿದೆ.
ಘಟನೆಯ ನಂತರ ಇಗುವಾಲಾದ ಮಾಜಿ ಮೇಯರ್ ಮತ್ತು ಹಲವಾರು ಪೊಲೀಸ್ ಅಧಿಕಾರಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.