ಸಮಾಜ ಹಾಗೂ ಪ್ರತಿ ಕುಟುಂಬಕ್ಕೆ ಹಿರಿಯರ ಮಾರ್ಗದರ್ಶನ ಅತ್ಯಗತ್ಯ - ಜಿಲ್ಲಾಧಿಕಾರಿ

 ಸಮಾಜ ಹಾಗೂ ಪ್ರತಿ ಕುಟುಂಬಕ್ಕೆ  ಹಿರಿಯರ ಮಾರ್ಗದರ್ಶನ  ಅತ್ಯಗತ್ಯ   - ಜಿಲ್ಲಾಧಿಕಾರಿ  Guidance from elders is essential for society and every family - District Collector

ಲೋಕದರ್ಶನ ವರದಿ 

ಸಮಾಜ ಹಾಗೂ ಪ್ರತಿ ಕುಟುಂಬಕ್ಕೆ  ಹಿರಿಯರ ಮಾರ್ಗದರ್ಶನ  ಅತ್ಯಗತ್ಯ 

- ಜಿಲ್ಲಾಧಿಕಾರಿ  

ಹಾವೇರಿ 09 : ಸಮಾಜ ಹಾಗೂ ಪ್ರತಿ ಕುಟುಂಬಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ, ಎಲ್ಲ ಕಾಲಗಳಿಗೂ ಅವರ ಮಾರ್ಗದರ್ಶನ ಪ್ರಸ್ತುತವಾಗಿದೆ.  ಮನೆಯ ಹಿರಿಯರನ್ನು  ಗೌರವದಿಂದ ಕಾಣಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ್ ಎಲ್‌. ಅವರು ಹೇಳಿದರು. 

ಹಾವೇರಿ ನಗರದ ಹೊಸಮಠದ  ಬಸವೇಶ್ವರ ಸಮುದಾಯ ಭವನದಲ್ಲಿ ಗುರುವಾರ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಮತ್ತು ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ  ವಿಶ್ವ ಹಿರಿಯ ನಾಗರಿಕರ ದಿನಾಚರಣೆ - ಹಿರಿಯ ನಾಗರಿಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು. 

ಹಿರಿಯರ ಅನುಭವ ಬಹಳ ದೊಡ್ಡದು, ಪ್ರಸ್ತುತ ದಿನಗಳಲ್ಲಿ ಹಿರಿಯ ನಾಗರಿಕರನ್ನು ನಿರ್ಲಕ್ಷಿಸುತ್ತಿರುವುದು ವಿಷಾಧದ ಸಂಗತಿಯಾಗಿದೆ.  ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಕೆಲಸಕ್ಕೆ ಹೊರದೇಶಕ್ಕೆ  ಕಳಿಸುವ ಕನಸು ಕಾಣುತ್ತಾರೆ. ಇಂತಹ  ಹಿರಿಯರಿಗೆ ಆರ್ಥಿಕ ಭದ್ರತೆ ಹಾಗೂ ಸಾಮಾಜಿಕ ರಕ್ಷಣೆ ಒದಗಿಸುವತ್ತ ಗಮನ ನೀಡಬೇಕಿದೆ. ನಾನು ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಆಸ್ತಿ ವಿಷಯದ 170 ಪ್ರಕರಣಗಳನ್ನು  ಹಿರಿಯ ನಾಗರಿಕರ ಪರವಾಗಿ  ಮಾಡಿದ್ದೇನೆ. ಮಕ್ಕಳ ಬದುಕು ಕಟ್ಟಿಕೊಡಲು ತಮ್ಮ ಜೀವನ ಸವೆಸಿದ ತಂದೆ-ತಾಯಿಯನ್ನು  ಇಳಿ ವಯಸ್ಸಿನಲ್ಲಿ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಹೇಳಿದರು. 

ಸಹಾಯವಾಣಿ: ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ಹಿರಿಯರಿ ನಾಗರಿಕರಿಗೆ ಯಾವುದೇ ಸಮಸ್ಯೆಯಾದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ 1090ಕ್ಕೆ ಕರೆಮಾಡಬಹುದು ಎಂದು ಹೇಳಿದರು.  

ಉಚಿತ ಕಾನೂನು ನೆರವು: ಹಿರಿಯ ನಾಗರಿಕರ ಸಮಸ್ಯೆಗಳನ್ನು ಪರಿಹರಿಸಲು  ಹಿರಿಯ ನಾಗರಿಕರ ಕಾಯ್ದೆ ಜಾರಿಯಲ್ಲಿದ್ದು, ಒಂದು ವೇಳೆ ಹಿರಿಯ ನಾಗರಿಕರು ಮಕ್ಕಳಿಂದ ಸಮಸ್ಯೆ ಎದುರಿಸುತ್ತಿದ್ದರೆ  ಕಾನೂನಿನ ನೆರವು ಪಡೆದುಕೊಳ್ಳಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ಒದಗಿಸಲಾಗುವುದು.  ಹಿರಿಯ ನಾಗರಿಕರು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.   

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಕಾನೂನು ನೆರವು ಅಭಿರಕ್ಷಣಾ ನ್ಯಾಯವಾದಿ ಎನ್‌.ಎನ್‌.ದಿಳ್ಳೆಪ್ಪನವರ  ಅವರು ಹಿರಿಯ ನಾಗರಿಕರ ಕಾಯ್ದೆ 2007ರ ಕುರಿತು ಉಪನ್ಯಾಸ ನೀಡಿದರು.  

ಸನ್ಮಾನ-ಪ್ರಶಸ್ತಿ ಪತ್ರ ವಿತರಣೆ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು ಹಾಗೂ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಿರಿಯ ನಾಗರಿಕರ ಆಯೋಜಿಸಲಾದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು. 

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶ್ರೀಮತಿ ಆಶು ನದಾಫ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  

ಹೊಸಮಠದ ಬಸವ ಶಾಂತಲಿಂಗ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ತದರ್ಶಿಗಳಾದ ಶ್ರೀಮತಿ ಶ್ರೀಶೈಲಜಾ ಎಚ್‌.ವಿ., ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್‌.ಎಚ್‌.ಜತ್ತಿ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ರೀಮತಿ ರೇವತಿ ಹೊಸಮಠ,  ಸಿಪಿಐ ಎಸ್‌.ಆರ್‌.ಗಣಾಚಾರಿ, ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್‌.ಬಿ.ಅಣ್ಣಿಗೇರಿ ಇತರರು ಉಪಸ್ಥಿತರಿದ್ದರು. 

ವಿಶೇಷ ಮಧ್ಯಸ್ಥಿಕೆ ಅಭಿಯಾನದಲ್ಲಿ 119 ಪ್ರಕರಣಗಳು ಇತ್ಯರ್ಥ 

ಹಾವೇರಿ 09 : ಜಿಲ್ಲೆಯಲ್ಲಿ  ಜುಲೈ 1 ರಿಂದ ಅಕ್ಟೋಬರ್ 6ರವರೆಗೆ ಜರುಗಿದ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನದಲ್ಲಿ  ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳ 22,703 ಪ್ರಕರಣಗಳ ಪೈಕಿ ಮಧ್ಯಸ್ಥಿಕೆಗಾಗಿ ಗುರುತಿಸಲಾದ 1200 ಪ್ರಕರಣಗಳಲ್ಲಿ,  ಮಧ್ಯಸ್ಥಿಕೆಗಾಗಿ ತೆಗೆದುಕೊಂಡ 519 ಪ್ರಕರಣಗಳಲ್ಲಿ 119 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ್ ದೇವೇಂದ್ರ​‍್ಪ ಎನ್‌. ಅವರು  ತಿಳಿಸಿದ್ದಾರೆ. 

ಪ್ರಕರಣಗಳ ವಿವರ: ವೈವಾಹಿಕ ವಿವಾದದ 586 ಪ್ರಕರಣಗಳ ಪೈಕಿ ಮಧ್ಯಸ್ಥಿಕೆಗಾಗಿ ಗುರುತಿಸಲಾದ 110 ಪ್ರಕರಣಗಳಲ್ಲಿ,  ಮಧ್ಯಸ್ಥಿಕೆಗಾಗಿ ತೆಗೆದುಕೊಂಡ 32 ಪ್ರಕರಣಗಳಲ್ಲಿ 08 ಪ್ರಕರಣಗಳು ಇತ್ಯರ್ಥಗೊಂಡಿವೆ. 

ಅಪಘಾತ ಹಕ್ಕುಗಳ 720 ಪ್ರಕರಣಗಳ ಪೈಕಿ ಮಧ್ಯಸ್ಥಿಕೆಗಾಗಿ ಗುರುತಿಸಲಾದ 104 ಪ್ರಕರಣಗಳಲ್ಲಿ,  ಮಧ್ಯಸ್ಥಿಕೆಗಾಗಿ ತೆಗೆದುಕೊಂಡ 90 ಪ್ರಕರಣಗಳಲ್ಲಿ 31 ಪ್ರಕರಣಗಳು ಇತ್ಯರ್ಥಗೊಂಡಿವೆ. 

ಕೌಟುಂಬಿಕ ದೌರ್ಜನ್ಯದ 796 ಪ್ರಕರಣಗಳ ಪೈಕಿ ಮಧ್ಯಸ್ಥಿಕೆಗಾಗಿ ಗುರುತಿಸಲಾದ ನಾಲ್ಕು ಪ್ರಕರಣಗಳಲ್ಲಿ,  ಮಧ್ಯಸ್ಥಿಕೆಗಾಗಿ ತೆಗೆದುಕೊಂಡ ಮೂರು ಪ್ರಕರಣಗಳಲ್ಲಿ ಒಂದು ಪ್ರಕರಣ ಇತ್ಯರ್ಥಗೊಂಡಿದೆ. 

ಚೆಕ್ ಬೌನ್ಸ್‌ 7278 ಪ್ರಕರಣಗಳ ಪೈಕಿ ಮಧ್ಯಸ್ಥಿಕೆಗಾಗಿ ಗುರುತಿಸಲಾದ 94 ಪ್ರಕರಣಗಳಲ್ಲಿ,  ಮಧ್ಯಸ್ಥಿಕೆಗಾಗಿ ತೆಗೆದುಕೊಂಡ 86 ಪ್ರಕರಣಗಳಲ್ಲಿ 32 ಪ್ರಕರಣಗಳು ಇತ್ಯರ್ಥಗೊಂಡಿವೆ. 

ಅಪರಾಧಿ ಸಂಬಂಧಿ 507 ಪ್ರಕರಣಗಳ ಪೈಕಿ ಮಧ್ಯಸ್ಥಿಕೆಗಾಗಿ ಗುರುತಿಸಲಾದ 117 ಪ್ರಕರಣಗಳಲ್ಲಿ,  ಮಧ್ಯಸ್ಥಿಕೆಗಾಗಿ ತೆಗೆದುಕೊಂಡ 26 ಪ್ರಕರಣಗಳಲ್ಲಿ ಒಂಭತ್ತು ಪ್ರಕರಣಗಳು ಇತ್ಯರ್ಥಗೊಂಡಿವೆ. 

ಪಾಲು ವಿಭಾಗದ 4754 ಪ್ರಕರಣಗಳ ಪೈಕಿ ಮಧ್ಯಸ್ಥಿಕೆಗಾಗಿ ಗುರುತಿಸಲಾದ 284 ಪ್ರಕರಣಗಳಲ್ಲಿ,  ಮಧ್ಯಸ್ಥಿಕೆಗಾಗಿ ತೆಗೆದುಕೊಂಡ 179 ಪ್ರಕರಣಗಳಲ್ಲಿ 17 ಪ್ರಕರಣಗಳು ಇತ್ಯರ್ಥಗೊಂಡಿವೆ. 

ಇತರೆ ಸಿವಿಲ್‌ಗೆ ಸಂಬಂಧಿಸಿದ 6719 ಪ್ರಕರಣಗಳ ಪೈಕಿ ಮಧ್ಯಸ್ಥಿಕೆಗಾಗಿ ಗುರುತಿಸಲಾದ 104 ಪ್ರಕರಣಗಳಲ್ಲಿ,  ಮಧ್ಯಸ್ಥಿಕೆಗಾಗಿ ತೆಗೆದುಕೊಂಡ 63 ಪ್ರಕರಣಗಳಲ್ಲಿ 21 ಪ್ರಕರಣಗಳು ಇತ್ಯರ್ಥಗೊಂಡಿವೆ. 

ಮಧ್ಯಸ್ಥಿಕೆ ಅಭಿಯಾನದಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳಲ್ಲಿ ನೇಮಕಗೊಂಡಿರುವ ಮಧ್ಯಸ್ಥಿಕೆ ವಕೀಲರು, ನ್ಯಾಯವಾದಿಗಳು, ಕಕ್ಷಿದಾರರು, ಸಿಬ್ಬಂದಿ ಮತ್ತು ಇತರರು ನೀಡಿದ ಸಹಕಾರದಿಂದ ವಿಶೇಷ 90 ದಿನಗಳ ಮಧ್ಯಸ್ಥಿಕೆ ಅಭಿಯಾನವು ತುಂಬಾ ಯಶಸ್ವಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ್ ದೇವೇಂದ್ರ​‍್ಪ ಎನ್‌. ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ತದರ್ಶಿಗಳಾದ ಶ್ರೀಮತಿ ಶ್ರೀಶೈಲಜಾ ಎಚ್‌.ವಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.