ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ

ಬೆಂಗಳೂರು, ನ.15 :     ದಾಸ ಶ್ರೇಷ್ಠರಾದ ಸಂತ ಕನಕದಾಸರ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ನಾಡಿನ ರಾಜಕೀಯ ನಾಯಕರು, ಸಾಮಾಜಿಕ ಧುರೀಣರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.\\ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿ, ತಮ್ಮ ಸಾಹಿತ್ಯದಲ್ಲಿ ವಿಡಂಬನೆಯ ಮೂಲಕ ಸಮಾಜದ ಸಾಕ್ಷಿಪ್ರಜ್ಞೆ ಯನ್ನೂ ಬಡಿದೆಬ್ಬಿಸಿದ, ಭಕ್ತಿ ರಸದ ಹೊನಲು ಹರಿಸಿದ ಸಂತಶ್ರೇಷ್ಠ ಕನಕದಾಸರ ಜಯಂತಿ ಶುಭಾಶಯಗಳು ಎಂದು ಶುಭ ಕೋರಿದ್ದಾರೆ. ಸಮಸ್ತ ಜನತೆಗೆ ದಾಸ ಶ್ರೇಷ್ಠರಾದ, ಸಂತ ಕನಕದಾಸರ ಜಯಂತಿಯ ಶುಭಾಶಯಗಳು. ಸಮಾಜದ ಮೇಲು, ಕೀಳು, ಜಾತಿ, ಮತ ಸಿದ್ಧಾಂತದ ವಿರುದ್ಧ ಪ್ರತಿಭಟನಾ ನೆಲೆಗಟ್ಟಿನಲ್ಲಿ ದಾಸ ಸಾಹಿತ್ಯಕ್ಕೆ ವೈಚಾರಿಕ ಪ್ರಭೆ ತಂದರು. ಅವರು ಸಾರಿದ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಅವರ ನೀಡಿದ ಆದರ್ಶ ನಮಗೆಲ್ಲರಿಗೂ ದಾರಿದೀಪವಾಗಲಿ ಎಂದು ಯಡಿಯೂರಪ್ಪ ಆಶಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಟ್ವೀಟ್ ಮಾಡಿ, ನಾಡಿನ ಸಮಸ್ತ ಜನತೆಗೆ ಕನಕ ಜಯಂತಿಯ ಹಾರ್ದಿಕ ಶುಭಾಶಯಗಳು. ಕರ್ನಾಟಕ ಕೀರ್ತನಾ ಸಾಹಿತ್ಯದ ಅಶ್ವಿನಿ ದೇವತೆಯಾಗಿರುವ ಕನಕದಾಸರ ಕೀರ್ತನೆಗಳು ಮನುಜ  ಕುಲವನ್ನು ಸನ್ಮಾರ್ಗದತ್ತ ಕೊಂಡೊಯ್ಯುವಂತದ್ದಾಗಿವೆ. ಸಮ ಸಮಾಜದ ನಿರ್ಮಾಣಕ್ಕಾಗಿ   ಕೀರ್ತನೆಗಳ ಮೂಲಕವೇ ಅರಿವು ಮೂಡಿಸಿದ ದಾಸ ಶ್ರೇಷ್ಠರು ಕನಕದಾಸರು ಎಂದು ತಿಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಟ್ವೀಟ್ನಲ್ಲಿ, ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರ, ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ  ಕಾಣಿಕೆಯನ್ನಿತ್ತ, ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರಾದ ಶ್ರೀ  ಕನಕದಾಸರ ಜನ್ಮ ಜಯಂತಿಯ ಶುಭಾಶಯಗಳು ಎಂದು ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ನಮಗಿಂದು ಬೇಕಾಗಿರುವುದು ಕನಕದಾಸರು ಪ್ರತಿಪಾದಿಸಿದ ಜಾತಿ-ವರ್ಣ-ವರ್ಗ-ಲಿಂಗ ಭೇದ ಇಲ್ಲದ ಹಿಂದು ಧರ್ಮ. ವರ್ಣವ್ಯವಸ್ಥೆಯನ್ನು ಪ್ರತಿಪಾದಿಸುವ ಧರ್ಮ ಅಲ್ಲ. ಕನಕನೆಡೆಗೆ ನಮ್ಮ ನಡೆ ಇರಲಿ ಎಂದು ತಿಳಿಸಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ ಅವರು, ಐದುನೂರು ವರ್ಷಗಳ ಹಿಂದೆಯೇ 'ಕುಲ ಕುಲ ಎಂದು ಹೊಡೆದಾಡದಿರಿ...' ಎಂದು ವರ್ಣಾಶ್ರಮ ವ್ಯವಸ್ಥೆ ಸೃಷ್ಟಿಸಿರುವ ಜಾತಿ ನರಕವನ್ನು ದಿಟ್ಟತನದಿಂದ ಪ್ರಶ್ನಿಸಿ ಆತ್ಮಾವಲೋಕನಕ್ಕೆ ಕರೆಕೊಟ್ಟ ಸಂತ ಕನಕದಾಸರನ್ನು ಇಂದು ನೆನೆಯೋಣ, ಅವರು ತೋರಿದ ದಾರಿಯಲ್ಲಿ ಸಾಗೋಣ. ಕನಕದಾಸಜಯಂತಿ ಎಂದು ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ಸಮಸ್ತ ಕನ್ನಡನಾಡಿನ ಜನತೆಗೆ ಕನಕ ಜಯಂತಿಯ ಹಾರ್ದಿಕ ಶುಭಾಶಯಗಳು. ಜಾತಿ ಮತಗಳ ಕಟ್ಟು  ಪಾಡುಗಳಿಲ್ಲದೇ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಾಯ್ನುಡಿಯಲ್ಲಿ  ಹಾಡಿ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಅತ್ಯಮೂಲ್ಯವಾದ ಕೊಡುಗೆ ನೀಡಿದ ದಾಸಶ್ರೇಷ್ಠರು  ಕನಕದಾಸರು ಎಂದು ತಿಳಿಸಿದ್ದಾರೆ.