ಹಸಿರೇ ಉಸಿರು: ಬೆಳಘಟ್ಟಿ ಶಾಲೆಯಲ್ಲಿ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ

ಹಸಿರೇ ಉಸಿರು: ಬೆಳಘಟ್ಟಿ ಶಾಲೆಯಲ್ಲಿ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ Green is the breath of life: Meaningful World Environment Day celebration at Belaghatti School

ಗದಗ, (ಶಿರಹಟ್ಟಿ) 05 : ತಾಲೂಕಿನ ಬೆಳಘಟ್ಟಿ ಸರ್ಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗದಗ ಡಯಟ್ನ ಉಪ ಪ್ರಾಂಶುಪಾಲರಾದ ಜಿ.ಎಂ. ಮಂದಿನಮನಿ ಅವರು ಶಾಲೆಗೆ ಭೇಟಿ ನೀಡಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳ ಸಮಗ್ರ ಪರೀಶೀಲನೆ ನಡೆಸಿ ಮಾರ್ಗದರ್ಶನ ನೀಡಿದರು.ಶಾಲೆಯ ದಾಖಲಾತಿ ಆಂದೋಲನ, ಪಾಲಕ-ಪೋಷಕರ ಮಹಾಸಭೆ, ವಾರ್ಷಿಕ ಕ್ರಿಯಾಯೋಜನೆ, ಸಂಯುಕ್ತ ವೇಳಾಪಟ್ಟಿ, ತರಗತಿವಾರು ಸಾಮರ್ಥ್ಯಗಳ ಪಟ್ಟಿ, ಸೇತುಬಂಧ ಕಾರ್ಯಕ್ರಮದ ಪೂರ್ವಸಿದ್ಧತೆ, ಶಾಲಾ ಮೈದಾನದ ಸ್ವಚ್ಛತೆ, ಬೋಧನಾ ಕೊಠಡಿಗಳ ನಿರ್ವಹಣೆ ಹಾಗೂ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಅವಲೋಕಿಸಿ ಶಿಕ್ಷಕರಿಗೆ ಅಗತ್ಯ ಸಲಹೆಗಳನ್ನು ನೀಡಿದರು.

ನಂತರ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಲಾಯಿತು. ಈ ವೇಳೆ ಮಾತನಾಡಿದ ಜಿ.ಎಂ. ಮಂದಿನಮನಿ ಅವರು, “ಹಸಿರೇ ಉಸಿರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಗಿಡವನ್ನು ನೆಟ್ಟು ಅದರ ಪಾಲನೆ-ಪೋಷಣೆಯ ಜವಾಬ್ದಾರಿಯನ್ನು ವಹಿಸಬೇಕು. ಗಿಡಕ್ಕೆ ಮಗುವಿನ ಹೆಸರನ್ನೇ ನಾಮಕರಣ ಮಾಡಿ ಅದರ ಬೆಳವಣಿಗೆಯನ್ನು ಗಮನಿಸುವ ಮೂಲಕ ಪರಿಸರದ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿಯನ್ನು ಬೆಳೆಸಬೇಕು” ಎಂದು ಹೇಳಿದರು.ಜೂನ್ 5ರಂದು ಮಾತ್ರ ಸಸಿ ನೆಡುವುದರಿಂದ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ.

ವರ್ಷದ ಪ್ರತಿದಿನವೂ ಪರಿಸರದ ಬಗ್ಗೆ ಕಾಳಜಿ ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಗಿಡ-ಮರಗಳಿಂದ ದೊರೆಯುವ ಶುದ್ಧ ಗಾಳಿ, ನೆರಳು ಹಾಗೂ ಪರಿಸರ ಸಮತೋಲನದ ಮಹತ್ವವನ್ನು ಮಕ್ಕಳಿಗೆ ವಿವರಿಸಿದರು.ಕಾರ್ಯಕ್ರಮದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ದೇವಪ್ಪ ಹಾಲಪ್ಪ ಕೋಟಿ, ಉಪಾಧ್ಯಕ್ಷೆ ಅನ್ನಪೂರ್ಣ ಸತ್ಯಪ್ಪ ಕಟ್ಟೆಣ್ಣವರ, ಎಸ್ಡಿಎಂಸಿ ಸದಸ್ಯರು, ಶಾಲೆಯ ಪ್ರಧಾನ ಗುರು ಅಣ್ಣಪ್ಪ ನೀಲಗಿರಿ, ಹಿರಿಯ ಶಿಕ್ಷಕರಾದ ನಾಗಪ್ಪ ಎಚ್‌. ಗೊಂದಿ ಹಾಗೂ ಆರ್‌.ವೈ. ಪಾಟೀಲ, ಅಕ್ಷರ ದಾಸೋಹ ಸಿಬ್ಬಂದಿಗಳಾದ ಪುಷ್ಪ ನಿಚ್ಚಳ ಮತ್ತು ಫಾತಿಮಾ ಬೇಗಂ ನೆಗಳೂರು ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.ಸಸಿ ನೆಡುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮವು ಅರ್ಥಪೂರ್ಣವಾಗಿ ಹಾಗೂ ಉತ್ಸಾಹಭರಿತವಾಗಿ ನೆರವೇರಿತು.