ಭಾರತ ಮಾತಾ ಉತ್ಸವದ ಅಂಗವಾಗಿ ಭವ್ಯ ಮೆರವಣಿಗೆ

ಭಾರತ ಮಾತಾ ಉತ್ಸವದ ಅಂಗವಾಗಿ ಭವ್ಯ ಮೆರವಣಿಗೆ  Grand procession as part of the Bharat Mata Utsav


ರಾಣೆಬೆನ್ನೂರು, ಆ.14: ಸ್ಥಳೀಯ ಮಾರುತಿ ನಗರದ ಶ್ರೀ ಭಾರತ ಮಾತಾ ಉತ್ಸವ ಸಮಿತಿಯ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಶ್ರೀ ಭಾರತ ಮಾತಾ ಉತ್ಸವ ಮೂರ್ತಿಯ ಮೆರವಣಿಗೆ ವಿವಿಧ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.  

ನಗರದ ಶಿಡ್ಲು ಪತ್ರಿಕೆ ಕಚೇರಿಯಿಂದ ಭಾರತ ಮಾತೆಯ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಶ್ರೀ ಭಾರತ ಮಾತಾ ಮೆರವಣಿಗೆಗೆ ನಗರ ಪಿಎಸ್‌ಐ ಬಿ.ಜಿ. ಪರಮೇಶ್ ಅವರು ರಾಷ್ಟ್ರಧ್ವಜದ ಭಾವುಟವನ್ನು ಆರೋಹಣ ಮಾಡುವ ಮೂಲಕ ಚಾಲನೆ ನೀಡಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಪಿಎಸ್‌ಐ ಬಿ.ಜಿ. ಪರಮೇಶ್, “ಭಾರತ ಮಾತೆಯ ಬಗ್ಗೆ ಯುವಕರಲ್ಲಿ ಅಭಿಮಾನ ಮೂಡಬೇಕು. ರಾಷ್ಟ್ರದ ಬಗ್ಗೆ ಗೌರವ ತೋರುವಂತಹ ಸೇವಾ ಕಾರ್ಯಗಳಲ್ಲಿ ಯುವಕರು ಸದಾ ಮುಂಚೂಣಿಯಲ್ಲಿರಬೇಕು. ಎಲ್ಲರೂ ಭಾರತ ದೇಶದ ಬಗ್ಗೆ ಹೆಮ್ಮೆ ಮೂಡಿಸುವಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಹೇಳಿದರು.  

ಮೆರವಣಿಗೆಯಲ್ಲಿ ಜಿಪಂ ಮಾಜಿ ಸದಸ್ಯ ಸಿ.ಸಿ. ಪಾಟೀಲ, ಬಿಸಿಎಂ ಇಲಾಖೆಯ ಜಿಲ್ಲಾ ನಿವೃತ್ತ ಅಧಿಕಾರಿ ವಿ.ಎಸ್‌. ಹಿರೇಮಠ, ಸಂಪಾದಕ ಆರಿ​‍್ಜ. ಮಹಾನುಭಾವಿಮಠ, ಸಮಿತಿ ಅಧ್ಯಕ್ಷ ಶಿವಯೋಗಿ ಮಹಾನುಭಾವಿಮಠ, ಕಾರ್ಯದರ್ಶಿ ಪ್ರೊ. ಎಚ್‌.ಎಂ. ದೊಡ್ಡಬಿಲ್ಲ, ಚಂದ್ರ​‍್ಪ ಉದಗಟ್ಟಿ, ಮುರುಗೇಶ್ ಎಂ., ಎಂ. ಚಿರಂಜೀವಿ, ಕೆ.ಎಸ್‌. ನಾಗರಾಜ, ಮಲ್ಲಿಕಾರ್ಜುನ ಕೆಂಚರೆಡ್ಡಿ, ಪ್ರಭಾವತಿ, ಕಲಾವತಿ, ಶ್ವೇತಾ, ಶಿವು ಸೇರಿದಂತೆ ವಿದ್ಯಾರ್ಥಿಗಳು, ಅಭಿಮಾನಿಗಳು ಹಾಗೂ ಸಮಿತಿ ಸದಸ್ಯರು ಭಾಗವಹಿಸಿದ್ದರು.  

ಮೆರವಣಿಗೆಯು ದುರ್ಗಾ ವೃತ್ತ, ಎಂಜಿ ರಸ್ತೆ, ದೊಡ್ಡಪೇಟೆ, ಸಂಗಮ ವೃತ್ತ, ಅಂಚೆ ವೃತ್ತ, ಮೆದ್ಲೇರಿ ವೃತ್ತ, ಬಸ್ ನಿಲ್ದಾಣ, ಪಿಬಿ ರಸ್ತೆ, ಕುರುಬಗೇರಿ ಕ್ರಾಸ್ ಹಾಗೂ ತಹಶೀಲ್ದಾರ್ ಕಚೇರಿ ಆವರಣದ ಮೂಲಕ ಸಾಗಿ ಮಾರುತಿ ನಗರದಲ್ಲಿರುವ ಭಾರತ ಮಾತಾ ಮಂದಿರಕ್ಕೆ ತಲುಪಿತು.  ಮಳೆಯ ನಡುವೆಯೂ ಮೆರವಣಿಗೆ ಸಡಗರದಿಂದ ಸಾಗಿದ್ದು ವಿಶೇಷವಾಗಿತ್ತು. ಬಳಿಕ ಸಂಜೆ ಭಾರತ ಮಾತಾ ಮಂದಿರದ ಆವರಣದಲ್ಲಿ ರಾಷ್ಟ್ರಭಕ್ತಿ ಜಾಗೃತಿ ಸಭೆ ನಡೆಯಿತು.