ಇಂಗಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಅಶ್ವಾರೂಢ ಪ್ರತಿಮೆ ಅನಾವರಣ

ಇಂಗಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಅಶ್ವಾರೂಢ ಪ್ರತಿಮೆ ಅನಾವರಣ Grand equestrian statue of Chhatrapati Shivaji Maharaj unveiled in Ingali village

ಮಾಂಜರಿ, ಜು.19: ಭಾರತೀಯ ಜನತಾ ಪಕ್ಷ ಅಥವಾ ಕಾಂಗ್ರೆಸ್ ಪಕ್ಷ ಮಾತ್ರವೇ ಭಾರತ ದೇಶವಲ್ಲ. ಭಾರತೀಯರ ಭಾವನೆಗಳಿಗೂ ಇಲ್ಲಿ ಬೆಲೆ ಸಿಗಬೇಕು. ಶೋಷಿತ ವರ್ಗಗಳ ಮೌಲ್ಯಗಳನ್ನು ಛತ್ರಪತಿ ಶಿವಾಜಿ ಮಹಾರಾಜ, ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳಿಂದ ಅರಿತುಕೊಳ್ಳಬೇಕು ಎಂದು ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದರು.

ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದಲ್ಲಿ ಸುಮಾರು ₹36 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಅಶ್ವಾರೂಢ ಪ್ರತಿಮೆಯನ್ನು ಭಾನುವಾರ ಅನಾವರಣಗೊಳಿಸಿ ಅವರು ಮಾತನಾಡಿದರು.

ಛತ್ರಪತಿ ಶಾಹು ಮಹಾರಾಜರು ಹಿಂದುಳಿದ ವರ್ಗಗಳಿಗೆ ಶೇ.50ರಷ್ಟು ಮೀಸಲಾತಿ ನೀಡಿದ್ದರು. ಮಹಿಳೆಯರಿಗೆ ಗೌರವ ನೀಡಿದ ರಾಜಮಾತೆ ಜಿಜಾಮಾತೆಯ ಆದರ್ಶ ಇಂದಿಗೂ ಪ್ರಸ್ತುತವಾಗಿದೆ. ಮರಾಠ ಸಮಾಜ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದು, ಸಮಾಜದ ಏಳಿಗೆಯೊಂದಿಗೆ ಇತರ ಸಮುದಾಯಗಳ ಅಭಿವೃದ್ಧಿಗೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್ ಹುಕ್ಕೇರಿ ಮಾತನಾಡಿ, ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಭಾರತೀಯರಿಗೆ ಮಾತ್ರವಲ್ಲ, ಜಗತ್ತಿನ ಅನೇಕ ರಾಷ್ಟ್ರಗಳಿಗೂ ಆದರ್ಶ ವ್ಯಕ್ತಿತ್ವವಾಗಿದ್ದಾರೆ ಎಂದು ಹೇಳಿದರು.

ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಜನರಲ್ಲಿ ರಾಷ್ಟ್ರಭಾವನೆ ಇನ್ನಷ್ಟು ಬಲಗೊಳ್ಳಬೇಕು. ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳಿಗೆ ಗೌರವ ನೀಡಿದ ಶಿವಾಜಿ ಮಹಾರಾಜರು ಎಲ್ಲರಿಗೂ ಆದರ್ಶ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ ಮಾತನಾಡಿ, ಇಂಗಳಿ ಗ್ರಾಮದಲ್ಲಿ ಮರಾಠ ಸಮಾಜದ ಅಭಿವೃದ್ಧಿಗಾಗಿ ₹3 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ಅನುದಾನದಿಂದ ಕೃಷ್ಣಾ ನದಿ ತೀರದ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.