ಅತಿಥಿ ಉಪನ್ಯಾಸಕರ ನೇಮಕಕ್ಕೆ ಒತ್ತಾಯಿಸಿ ಪದವಿ ವಿದ್ಯಾರ್ಥಿಗಳ ಪ್ರತಿಭಟನೆ

ಅತಿಥಿ ಉಪನ್ಯಾಸಕರ ನೇಮಕಕ್ಕೆ ಒತ್ತಾಯಿಸಿ ಪದವಿ ವಿದ್ಯಾರ್ಥಿಗಳ ಪ್ರತಿಭಟನೆ Graduate students protest demanding appointment of guest lecturers

ಬೆಳಗಾವಿ 09: ಅತಿಥಿ ಉಪನ್ಯಾಸಕರ ನೇಮಕಕ್ಕೆ ಒತ್ತಾಯಿಸಿ ಎ ಐ ಡಿ ಎಸ್ ಓ ನೇತೃತ್ವದಲ್ಲಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಇಂದು ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.  

ಎ ಐ ಡಿ ಎಸ್ ಓ ಜಿಲ್ಲಾ ಸಂಚಾಲಕ ಮಹಾಂತೇಶ್ ಬಿಳ್ಳೂರು ಅವರು ಮಾತನಾಡಿ ರಾಜ್ಯದಲ್ಲಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆ ಇದ್ದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ರಾಜ್ಯಾದ್ಯಂತ ಪದವಿ ತರಗತಿಗಳು ಆರಂಭಗೊಂಡು ತಿಂಗಳುಗಳು ಕಳೆದಿವೆ. ಆದರೇ, ಸರ್ಕಾರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡದ ಕಾರಣ ಶಿಕ್ಷಕ ಕೊರತೆಯಿಂದಾಗಿ ಸರಿಯಾಗಿ ತರಗತಿಗಳು ನಡೆಯದೇ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭವಿಷ್ಯವನ್ನು ಅತಂತ್ರವನ್ನಾಗಿಸಿ ನಷ್ಟ ಅನುಭವಿಸುವಂತಾಗುತ್ತಿದೆ.  

ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿವೆ. ಅಲ್ಲದೇ ಯುಜಿಸಿಯ ಹೊಸ ನಿರ್ದೆಶನಗಳು ಹಾಗೂ ಕೋರ್ಟನಲ್ಲಿ ನಡೆಯುತ್ತಿರುವ ಮೊಕದ್ದಮೆಯಿಂದ ಅತಿಥಿ ಉಪನ್ಯಾಸಕರ ನೇಮಕಾತಿಯು ನೆನೆಗುದಿಗೆ ಬಿದ್ದಿದೆ. ಶೈಕ್ಷಣಿಕ ವಿಷಯಗಳಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಪಾಲಿಸುವುದು ಕಡ್ಡಾಯವಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವಿದೆ. ಇದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಪೂರಕವಾದ ನಿಲುವು ತಾಳಬೇಕು. ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ಎಲ್ಲ ಗೊಂದಲಗಳ ನಿವಾರಣೆಗಾಗಿ ಶೀಘ್ರ ಸರ್ಕಾರ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಬಿಳ್ಳೂರು ಅವರು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ವಿವಿಧ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ಧರು.