ಬರಗಾಲ ಘೋಷಣೆಗೆ ಸರ್ಕಾರಕ್ಕೆ ಒತ್ತಾಯ: ಶಾಸಕ ನಾಡಗೌಡ

ಬರಗಾಲ ಘೋಷಣೆಗೆ ಸರ್ಕಾರಕ್ಕೆ ಒತ್ತಾಯ: ಶಾಸಕ ನಾಡಗೌಡ  Government urged to declare drought: MLA Nadagouda


ಮುದ್ದೇಬಿಹಾಳ 06 :  ವಿಜಯಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಶಾಸಕ ಸಿ.ಎಸ್‌. ನಾಡಗೌಡ (ಅಪ್ಪಾಜಿ) ಸರ್ಕಾರವನ್ನು ಒತ್ತಾಯಿಸಿದರು.  

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುದ್ದೇಬಿಹಾಳ ತಾಲೂಕಿನಲ್ಲಿ ವಾಡಿಕೆಗಿಂತ ಸುಮಾರು 2.5 ಎಂ.ಎಂ. ಮಳೆ ಕೊರತೆಯಾಗಿದ್ದು, ಮಳೆ ನಿರಾಶ್ರಿತ ಪ್ರದೇಶಗಳಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಒಣಗಿ ಹೋಗಿವೆ. ರೈತರು ಸಂಕಷ್ಟದಲ್ಲಿದ್ದರೂ ಅವರ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸದಿರುವುದು ಬೇಸರದ ಸಂಗತಿ ಎಂದರು.  

ಬರ ಘೋಷಣೆಗೆ ಸರ್ಕಾರ ವಿಧಿಸಿರುವ ಎಲ್ಲ ಮಾನದಂಡಗಳು ಮುದ್ದೇಬಿಹಾಳ ತಾಲೂಕಿಗೂ ಅನ್ವಯಿಸುತ್ತವೆ. ಜಿಲ್ಲೆಯಲ್ಲಿ ಮಳೆ, ಬೆಳೆ ಪರಿಸ್ಥಿತಿ ಹಾಗೂ ರೈತರ ಸಂಕಷ್ಟದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ವಾಸ್ತವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಆ ವರದಿ ಆಧರಿಸಿ ಸರ್ಕಾರ ಬರ ಘೋಷಣೆ ಮಾಡಬೇಕಿದೆ ಎಂದು ಹೇಳಿದರು.  

ಬರಪೀಡಿತ ಪ್ರದೇಶಗಳನ್ನು ಗುರುತಿಸುವಾಗ ಮಳೆ ಕೊರತೆಯಿರುವ ಪ್ರದೇಶಗಳನ್ನು ಹೊರತುಪಡಿಸಿ ಸಂಪೂರ್ಣ ನೀರಾವರಿ ಪ್ರದೇಶಗಳನ್ನೇ ಪರಿಗಣಿಸಿರುವುದು ಅರ್ಥವಾಗುತ್ತಿಲ್ಲ. ಮಳೆ ಕೊರತೆಯಿಂದ ಸಂಕಷ್ಟಕ್ಕೀಡಾದ ಎಲ್ಲ ರೈತರಿಗೆ ನ್ಯಾಯ ದೊರಕಬೇಕು ಎಂದು ನಾಡಗೌಡ ಆಗ್ರಹಿಸಿದರು.  

ರೈತರ ನೋವಿನ ಸಂದರ್ಭದಲ್ಲಿ ರಾಜಕೀಯ ಮಾಡಬಾರದು. ರೈತರ ಸಮಸ್ಯೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ರೈತರ ಹಿತವೇ ಎಲ್ಲರ ಆದ್ಯತೆಯಾಗಬೇಕು ಎಂದರು.  

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಜಿಲ್ಲೆಯಲ್ಲಿ ಮಳೆ ಹಾಗೂ ಬೆಳೆ ಹಾನಿಯ ವಾಸ್ತವ ವರದಿ ಪಡೆದು ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದರೆ ರೈತರೊಂದಿಗೆ ಸತ್ಯಾಗ್ರಹ ನಡೆಸುವ ಅನಿವಾರ್ಯತೆ ಎದುರಾಗಬಹುದು ಎಂದು ಶಾಸಕ ನಾಡಗೌಡ ಎಚ್ಚರಿಸಿದರು.